ದಾವಣಗೆರೆ: ಜಿಲ್ಲೆಯ ಚನ್ನಗಿರಿಯಲ್ಲಿ ಕೆಎಸ್ ಆರ್ ಟಿಸಿ (KSRTC) ನೂತನ ಬಸ್ ಘಟಕ ಆರಂಭದಿಂದ ಈ ಭಾಗದ ಜನರ ಬಹು ದಿನಗಳ ಬೇಡಿಕೆ ಈಡೇರಿದ್ದು ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಜಿಲ್ಲೆ ವತಿಯಿಂದ ಏರ್ಪಡಿಸಿದ್ದ ಚನ್ನಗಿರಿಯ ಅಜ್ಜಿಹಳ್ಳಿ ಬಳಿ ನೂತನವಾಗಿ ನಿರ್ಮಾಣ ಮಾಡಿರುವ ಬಸ್ ಘಟಕ ಉದ್ಘಾಟನೆ ಮಾಡಿ ಮಾತನಾಡಿದರು.
ದಾವಣಗೆರೆ ನೂತನ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣಕ್ಕೆ ಕ್ಷೇತ್ರದಲ್ಲಿ ಹೆಚ್ಚು ಜನಪರ ಕೆಲಸ ಮಾಡಿದ ಪಂಪಾಪತಿ ಅವರ ಹೆಸರಿಡಲು ತೀರ್ಮಾನಿಸಲಾಗಿದೆ.
-ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್
ಚನ್ನಗಿರಿ ಬಸ್ ಘಟಕ ಸ್ಥಾಪನೆಯಿಂದ ಈ ಭಾಗದಲ್ಲಿನ ವಾಹನ ಸಂಚಾರ ಸಮಸ್ಯೆ ನೀಗಿದ್ದು, ಹೊಸದಾಗಿ 40 ಹೆಚ್ಚುವರಿ ಬಸ್ ಘಟಕ್ಕೆ ಸೇರಿದಂತಾಗಿದೆ. ಇದರಿಂದ ತಾಲ್ಲೂಕಿನ ಪಟ್ಟಣ ಮತ್ತು ಗ್ರಾಮೀಣ ಭಾಗದ ಜನತೆಗೆ, ಸಾರ್ವಜನಿಕರಿಗೆ, ಮಹಿಳೆಯರು, ವಿಧ್ಯಾರ್ಥಿಗಳಿಗೆ ಹಾಗೂ ಹಳ್ಳಿಗಳಿಂದ ನಗರಕ್ಕೆ ಅಥವಾ ಇತರೆಡೆಗೆ ಹೋಗುವ ಕಾರ್ಮಿಕರಿಗೆ, ನೌಕರರಿಗೆ ಸಾಕಷ್ಟು ಅನುಕೂಲವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಬಸ್ ನಿಲ್ದಾಣಗಳ ಅವಶ್ಯಕತೆ ಇದೆ. ಅದೇ ರೀತಿ ಚನ್ನಗಿರಿ ತಾಲೂಕಿನಲ್ಲಿಯೂ ಸಹ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆ ವಿಭಾಗದ ಹೊನ್ನಾಳಿ, ಹರಿಹರ ಜಗಳೂರು ಸೇರ್ಪಡೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ನೂತನ ಬಸ್ ನಿಲ್ದಾಣಕ್ಕೆ ಪಂಪಾಪತಿ ಹೆಸರು
ದಾವಣಗೆರೆ ನೂತನ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣಕ್ಕೆ ಕ್ಷೇತ್ರದಲ್ಲಿ ಹೆಚ್ಚು ಜನಪರ ಕೆಲಸ ಮಾಡಿದ ಪಂಪಾಪತಿ ಅವರ ಹೆಸರಿಡಲು ತೀರ್ಮಾನಿಸಲಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 10.83 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರಲ್ಲಿ ಚನ್ನಗಿರಿ ತಾಲೂಕಿನ 13.11 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ತಿಳಿಸಿದರು.
900 ಕೆಎಸ್ಆರ್ ಟಿಸಿ ಬಸ್ ಖರೀದಿ
ಕೆಎಸ್ ಆರ್ ಟಿಸಿಯಿಂದ ನೂತನವಾಗಿ 900 ಬಸ್ ಖರೀದಿಸಲಾಗುತ್ತಿದೆ. ಅದರಲ್ಲಿ ಜಿಲ್ಲೆಗೆ ಅವಶ್ಯವಿರುವ ಹೆಚ್ಚುವರಿ ಬಸ್ ಗಳನ್ನು ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಿದರು.
ದಾವಣಗೆರೆ KSRTC ರಾಜ್ಯದ ಎರಡನೇ ವಿಶಾಲವಾದ ಬಸ್ ನಿಲ್ದಾಣ
ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಾತನಾಡಿ ನಾಲ್ಕು ಎಕರೆ ಜಮೀನಿನಲ್ಲಿ ಎಂಟು ಕೋಟಿ ರೂ ವೆಚ್ಚದಲ್ಲಿ ಚನ್ನಗಿರಿ ತಾಲೂಕು ಬಸ್ ಘಟಕ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಅತಿ ದೊಡ್ಡ ಬಸ್ ನಿಲ್ದಾಣ ವೆಂದರೆ ಬೆಂಗಳೂರು ಬಸ್ ನಿಲ್ದಾಣ, ಅದನ್ನು ಹೊರತುಪಡಿಸಿದರೆ ಎಲ್ಲಾ ಸೌಕರ್ಯ ಗಳೊಂದಿಗೆ ನಿರ್ಮಾಣ ಮಾಡಿರುವ ವಿಶಾಲವಾದ ಬಸ್ ನಿಲ್ದಾಣ ದಾವಣಗೆರೆಯಾಗಿದೆ. ಶಕ್ತಿ ಯೋಜನೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜ್ಯದಲ್ಲಿ ಶೇ 23 ರಷ್ಟು ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಹೇಳಿದರು.
ಶಾಸಕರಾದ ಬಸವರಾಜ ವಿ. ಶಿವಗಂಗಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಸ್ ಘಟಕ ನಿರ್ಮಾಣಕ್ಕೆ ನಿವೇಶನ ಸಮಸ್ಯೆ ಇತ್ತು, ಅದನ್ನು ಬಗೆ ಹರಿಸಲಾಗಿದೆ. ಹೊಸ ಬಸ್ ನಿಲ್ದಾಣಕ್ಕೆ ಎರಡು ಎಕರೆ ನಿವೇಶನ ಗುರುತಿಸಲಾಗಿದೆ. ಇನ್ನು ಎರಡು ತಿಂಗಳಲ್ಲಿ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ ಮಾಡಲಾಗುವುದು ಎಂದ ಅವರು ಚನ್ನಗಿರಿಯಿಂದ ಯಾತ್ರಾ ಸ್ಥಳಗಳಿಗೆ ಬಸ್ ಸೇವೆ ಒದಗಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನೆ ಪಡೆದುಕೊಳ್ಳಬೇಕು. ಬಸ್ ಘಟಕಕ್ಕೆ ಅವಶ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸಹ ಈಗಾಗಲೇ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಸ್. ಬಸವಂತಪ್ಪ, ಕರ್ನಾಟಕ ಜೀವ ವೈವಿಧ್ಯ ನಿಗಮ ಮಂಡಳಿ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಮನೂರು ಟಿ. ಬಸವರಾಜ್ , ಅಜ್ಜಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೋವಿಂದರಾಜ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಶ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲ್ ರಾವ್ , ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್.ಶಿವಕುಮಾರಯ್ಯ ಹಾಗೂ ಇತರರು ಉಪಸ್ಥಿತರಿದ್ದರು