ದಾವಣಗೆರೆ: ಗುಡುಗು ಸಹಿತ ಬಿರು ಗಾಳಿಗೆ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಅಡಿಕೆ ಬೇಯಿಸುವ ಮನೆಗೆ ಬೆಂಕಿ ಬಿದ್ದಿದ್ದು, ಬೇಯಿಸಿ ಒಣಗಿಸಿ ಸಂಗ್ರಹಿಸಿದ್ದ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.
ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆಯ ಗ್ರಾಮದ ಮಾಳಗೆರೆ ತಿಪ್ಪಣ್ಣ ಎಂಬುವರ ಅಡಿಕೆ ಬೇಯಿಸುವ ಮನೆ ಸುಟ್ಟು ಕರಕಲಾಗಿದೆ. ಸಂಜೆ ಗುಡುಗು, ಸಿಡಿಲು ಸಹಿತ ಬಿರು ಗಾಳಿ ಬೀಸಿದೆ. ಇದರಿಂದ ವಿದ್ಯುತ್ ತಂತಿ ಕಟ್ ಆಗಿ ಮನೆ ಮೃಲೆ ಬಿದ್ದಿದೆ. ವಿದ್ಯುತ್ ತಂತಿಯಿಂದ ಹೊತ್ತಿದ ಬೆಂಕಿ ಕಿಡಿ ಜ್ವಾಲೆಯಾಗಿ ಧಗ ಧಗನೇ ಹೊತ್ತಿ ಉರಿದಿದೆ. ಹೀಗಾಗಿ ಖೇಣಿ ಮನೆಯಲ್ಲಿ ಸಂಗ್ರಹಿಸಿದ್ದ ಲಕ್ಷಾಂತರ ಬೆಲೆಯ ಅಡಿಕೆ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳೀಯರು ಕೂಡಲೇ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಷ್ಟರಲ್ಲಿ ಇಡೀ ಮನೆ ಸುಟ್ಟು ಹೋಗಿದೆ. ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



