ದಾವಣಗೆರೆ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಏಕಾಏಕಿ ಟ್ರ್ಯಾಕ್ಟರ್ ನಲ್ಲಿದ್ದ ಹುಲ್ಲು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬೆಳಲಗೆರೆ ಗ್ರಾಮದಲ್ಲಿ ನಡೆದಿದೆ.
ಕೋಟ್ಯಾಳ್ ಗ್ರಾಮದ ರಾಮಣ್ಣ ಬೆಳಲಗೆರೆ ಗ್ರಾಮದಲ್ಲಿ ಭತ್ತದ ಹುಲ್ಲು ಖರೀದಿಸಿದ್ದು, ಇಂದು ಜಮೀನಿನಿಂದ ಹುಲ್ಲನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ಟ್ರ್ಯಾಕ್ಟರ್ ನಲ್ಲಿದ್ದ ಹುಲ್ಲಿಗೆ ವಿದ್ಯುತ್ ತಂತಿ ತಗುಲಿದೆ. ಆಗ ಬೆಂಕಿ ಧಗ ಧಗ ಹೊತ್ತಿ ಉರಿದಿದೆ. ಟ್ರ್ಯಾಕ್ಟರ್ ನಲ್ಲಿ ಐದು ಜನರಿದ್ದು ಯಾರಿಗೂ ಹಾನಿಯಾಗಿಲ್ಲ. ಬೆಂಕಿ ತಗುಲಿದ ತಕ್ಷಣ ಟ್ರ್ಯಾಕ್ಟರ್ ನಿಂದ ಹುಲ್ಲನ್ನು ಕೆಳಗೆ ಕೆಡವಿದ್ದು , ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ.