ದಾವಣಗೆರೆ: ಜಿಲ್ಲೆಯ ಚನ್ನಗಿರಿ ಠಾಣೆಯಲ್ಲಿ ಯುವಕನ ಸಾವು ಪ್ರಕರಣದಿಂದ ಉದ್ರಿಕ್ತರ ಗುಂಪು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವಿಗೀಡಾಗಿದ್ದರಿಂದ ರೊಚ್ಚಿಗೆದ್ದ ಸಂಬಂಧಿಕರು ಠಾಣೆಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದರು. ಅಲ್ಲದೇ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದು ಲಾಕಪ್ ಡೆತ್ ಅಲ್ಲ. ಅವನಿಗೆ ಮೂರ್ಛೆ ರೋಗ ಇತ್ತು. ಆ ರೋಗದಿಂದ ಆತ ಮೃತ ಪಟ್ಟಿದ್ದಾನೆ. ಆದರೆ, ಎಫ್‌ಐಆರ್ ಮಾಡದೇ ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶ ಮಾಡಿದ್ದೇನೆ.ಆದರೆ ಇದು ಲಾಕಪ್ ಡೆತ್ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ಆರೋಪಿ ಆದಿಲ್ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪೊಲೀಸರು ಆತನನ್ನು ಠಾಣೆಗೆ ಕರೆತಂದಿದ್ದರು. ಠಾಣೆಗೆ ಕರೆತಂದು 7 ನಿಮಿಷದೊಳಗೆ ಆರೋಗ್ಯದಲ್ಲಿ ಏರುಪೇರು ಆಗಿ ಆದಿಲ್ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಕೆಜಿಹಳ್ಳಿ ಡಿಜೆಹಳ್ಳಿ ಘಟನೆ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯ ಘಟನೆಗೂ ಸಾಫ್ಟ್ ಆಗಿ ಉತ್ತರ ಕೊಟ್ಟಿರುವ ಪರಮೇಶ್ವರ್ ಅವರು, ಎಲ್ಲವೂ ಹೇಳಿ ಕೇಳಿ ಆಗಲ್ಲ. ಕಾನೂನು ರೀತಿ ಕ್ರಮ ವಹಿಸುತ್ತೇವೆಂದು ತಿಳಿಸಿದ್ದಾರೆ.
ಸರ್ಕಾರ ಹಾಗೂ ಅಧಿಕಾರಿಗಳಿಗೆ ಯಾರೂ ಗೌರವ ಕೊಡುವ ವಾತವರಣವಿಲ್ಲ. ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಗೌರವವಿಲ್ಲ, ಯಾಕೆಂದರೆ ಸರ್ಕಾರ ಆ ರೀತಿ ಇದೆ. ಪೊಲೀಸ್ ಅಧಿಕಾರಿಗಳನ್ನು ಆ ರೀತಿ ಬಳಕೆ ಮಾಡಿಕೊಂಡಿದ್ದಾರೆ ಸರ್ಕಾರದವರು. ಆದ್ದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತವಾಗಿದೆ. ಇದು ಸರ್ಕಾರದ ಸ್ವಯಂಕೃತ ಅಪರಾಧ. ಈ ಸರ್ಕಾರದ ಬಗ್ಗೆ ಅಧಿಕಾರಿಗಳಲ್ಲೂ ವಿಶ್ವಾಸವಿಲ್ಲ, ಜನತೆಯಲ್ಲೂ ವಿಶ್ವಾಸವಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಇನ್ನೂ ಚನ್ನಗಿರಿ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣ ಹಿನ್ನೆಲೆಯಲ್ಲಿ ಡಿವೈಎಸ್ಪಿ ಪ್ರಶಾಂತ್ ಪಿ ಮುನ್ನೋಳಿ ಹಾಗೂ ಸಿಪಿಐ ನಿರಂಜನ್ ಅವರನ್ನು ಅಮಾನತು ಮಾಡಲಾಗಿದೆ.
ಎಫ್‌ಐಆರ್ ದಾಖಲು ಮಾಡದೆ ಅರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದು ತಪ್ಪು ಎಂದು ಅಮಾನತು ಮಾಡಲಾಗಿದೆ. ಅದಿಲ್ ವಿರುದ್ಧ ಮಟ್ಕಾ ದಂಧೆ ಸಂಬಂಧ ಮೂರು ಪ್ರಕರಣ ದಾಖಲಾಗಿದ್ದವು. ಶುಕ್ರವಾರ ಮಟ್ಕಾ ಕೇಸ್‌ನಲ್ಲಿ ಅದಿಲ್‌ನನ್ನು ಠಾಣೆಗೆ ಪೊಲೀಸರು ಕರೆಸಿದ್ದರು. ಆದರೆ, ಠಾಣೆಯಲ್ಲಿ ಯುವಕ ಮೃತಪಟ್ಟಿದ್ದ. ಹೀಗಾಗಿ ಪೊಲೀಸರ ದೌರ್ಜನ್ಯದಿಂದ ಲಾಕಪ್ ಡೆತ್ ಆಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ



