ದಾವಣಗೆರೆ: ಜಿಲ್ಲೆಯ ಚನ್ನಗಿರಿಯ ಪಿಯು ಕಾಲೇಜ್ ಉಪನ್ಯಾಸಕರ ಮನೆಯ ಬೀಗ ಮುರಿದು 36 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿದ ಘಟನೆ ನಡೆದಿದೆ.
ಚನ್ನಗಿರಿ ಮಣ್ಣಮ್ಮ ಪ್ರೌಢಶಾಲೆಯ ಹಿಂಭಾಗದಲ್ಲಿರುವ ಮಣ್ಣಮ್ಮ ಪಿಯು ಕಾಲೇಜಿನ ಉಪನ್ಯಾಸಕ ಸಿದ್ದೇಶ್ವರಪ್ಪ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಬೀಗ ಮುರಿದು ಬಂಗಾರ, ಬೆಳ್ಳಿ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ. ಸಿದ್ದೇಶ್ವರಪ್ಪ ಅವರ ಪತ್ನಿ ಸಹ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮನೆಗೆ ಬೀಗ ಹಾಕಿ ಪುತ್ರಿಯನ್ನು ದಾವಣಗೆರೆ ನಗರದ ಕಾಲೇಜಿಗೆ ಬಿಡಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಮನೆಯ ಮುಂದೆ ಇರುವ ಕಬ್ಬಿಣದ ಸರಳು ಕತ್ತರಿಸಿದ ಕಳ್ಳರು ಮನೆಯ ಬಾಗಿಲ ಮುರಿದು ಮನೆಯ ಒಳಗೆ ನುಗ್ಗಿ ಬೀರುವಿನ ಬೀಗ ಮುರಿದು 15.80 ಲಕ್ಷ ಮೌಲ್ಯದ ಬಂಗಾರ ಹಾಗೂ 17.80 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಗೂ 1.50 ಲಕ್ಷ ನಗದು ಹಣ ದೋಚಿದ್ದಾರೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಡಿವೈಎಸ್ ಪಿ ಡಾ. ಸಂತೋಷ್ ಅವರ ಮಾರ್ಗದರ್ಶನದಲ್ಲಿ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



