ದಾವಣಗೆರೆ: ಜಾತಿಗಣತಿ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಸ್ವಪಕ್ಷೀಯ ಸಚಿವರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸಮರ್ಥ 7 ಲಿಂಗಾಯತ ಸಚಿವರು ಕೂಡಲೇ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಗಣತಿ ಲೋಪ ಬಗ್ಗೆ ನಮ್ಮ ಲಿಂಗಾಯತ ಸಮಾಜದ 7 ಜನ ಸಚಿವರಿದ್ದರೂ ಧ್ವನಿ ಎತ್ತಿಲ್ಲ. ಶಾಸಕರು ಇದರ ಬಗ್ಗೆ ಚರ್ಚೆ ಮಾಡಲು ಫೋನ್ ಮಾಡಿದರೂ ಸಚಿವರು ರಿಸೀವ್ ಮಾಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಲು ಸಚಿವ ಈಶ್ವರ್ ಖಂಡ್ರೆಯವರಿಗೆ ಕಾಲ್ ಮಾಡಿದ್ದರೂ ರಿಸೀವ್ ಮಾಡಲಿಲ್ಲ. 7 ಜನ ಸಚಿವರು ಕೂಡ ಅಸಮರ್ಥರಿದ್ದು, ಇವರೆಲ್ಲ ಕೂಡಲೇ ರಾಜೀನಾಮೇ ನೀಡಬೇಕು. ಒಕ್ಕಲಿಗ ಸಮಾಜಕ್ಕೆ ಅನ್ಯಾಯ ಆಗಿದೆ ಅಂದಕೂಡಲೇ ಡಿಸಿಎಂ ಡಿಕೆ ಶಿವಕುಮಾರ್ ಸಭೆ ಕರೆದು, ಆ ಸಮಾಜದ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ, ಲಿಂಗಾಯತ ಸಮುದಾಯದ ಸಚಿವರು ಮಾತ್ರ ಚರ್ಚೆ ಮಾಡ್ತಾ ಇಲ್ಲ ಎಂದು ಸ್ವಪಕ್ಷದ ಸಚಿವರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ನಮ್ಮ ಸಚಿವರಿಗೆ ಜಾತಿಗಣತಿಯ ಅವಶ್ಯಕತೆ ಇಲ್ಲ. ನಮ್ಮ ಸಮಾಜದ ಸಚಿವರು ಅವರ ಸ್ವಾರ್ಥಕ್ಕಾಗಿ ಮಾತ್ರ ರಾಜಕೀಯ ಮಾಡ್ತಿದ್ದಾರೆ. ಯಾವ ಯಾವ ಸಮುದಾಯಕ್ಕೆ ಅನ್ಯಾಯ ಆಗಿದೆಯೋ ಅವರೆಲ್ಲ ಸಭೆ ಮಾಡುತ್ತೇವೆ. ಜಾತಿ ಜನಗಣತಿ ಮರುಸಮೀಕ್ಷೆಗೆ ಒತ್ತಾಯಿಸುತ್ತೇವೆ ಎಂದರು.