ದಾವಣಗೆರೆ: ಕಾರು ಚಾಲನೆ ಮಾಡುತ್ತಿರುವ ವೇಳೆಯಲ್ಲಿಯೇ ಚಾಲಕನಿಗೆ ಹೃದಯಾಘಾತವಾದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಸರಣಿ ಅಪಘಾತವಾದ ಘಟನೆ ನಗರದಲ್ಲಿ ನಡೆದಿದೆ. ಈ ಅಪಘಾತದಲ್ಲಿ ಕಾರಿನ ಎದುರಿಗೆ ಬಂದ ವಾಹನ ಮತ್ತು ಜನರಿಗೆ ಡಿಕ್ಕಿ ಹೊಡೆದಿದೆ. ಶನಿವಾರ ರಾತ್ರಿ ನಗರದ ಕೆಬಿ ಬಡಾವಣೆಯ ಸಿದ್ದಮ್ಮ ಪಾರ್ಕ್ ಬಳಿ ಈ ಘಟನೆ ನಡೆದಿದೆ.
ಅಪಘಾತದಲ್ಲಿ ಆಟೋ, ಬೈಕ್, ಸ್ಕೂಟಿಗಗಳಿಗೆ
ಕಾರು ಡಿಕ್ಕಿ ಹೊಡೆದಿದ್ದು, ವಾಹನಗಳು ನಜ್ಜು
ಗುಜ್ಜಾಗಿವೆ. ಕಾರು ಚಾಲಕ ಸೇರಿದಂತೆ ಅಪಘಾತದಲ್ಲಿ ಗಾಯಗೊಂಡವರೆನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಸಣ್ಣ ಮಗುವಿನ, ವೃದ್ಧೆಯ ಕಾಲು ಮುರಿದಿದ್ದು, ನಾಲೈದು ಜನ ಗಾಯಗೊಂಡಿದ್ದಾರೆ. ನೇರ್ಲಿಗೆ ಗ್ರಾಮದ ಕೆಂಚವೀರಪ್ಪ (50) ಎಂಬುವವರು ದಾವಣಗೆರೆ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಸಂಬಂಧಿಯನ್ನು ನೋಡಲು ಕಾರಿನಲ್ಲಿ ಬಂದಿದ್ದರು. ಸಿದ್ದಮ್ಮ ಪಾರ್ಕ್ ಬಳಿ ಕಾರು ಚಾಲನೆ ಮಾಡುವ ವೇಳೆ ಹೃದಯಾಘಾತವಾಗಿದೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಪುಟ್ಟ ಮಗುವಿಗೆ, ವೃದ್ಧೆಗೆ, ಓರ್ವ ಪೊಲೀಸ್ ಸಿಬ್ಬಂದಿಗೆ, ಮತ್ತೋರ್ವ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಪುಟ್ಟ ಮಗುವಿನ ಒಂದು ಕಾಲು,
-65 ವರ್ಷ ವೃದ್ಧಿಯ ಎರಡೂ ಕಾಲು ಮುರಿದಿದೆ. ಪೊಲೀಸ್ ಸಿಬ್ಬಂದಿಗೆ ಒಳ ಹೊಡೆತ ಬಿದ್ದಿದ್ದು, ಮತ್ತೋರ್ವ ವ್ಯಕ್ತಿ ಸಂಪತ್ ಎಂಬುವವರಿಗೆ ತಲೆಗೆ ತೀವ್ರರವಾದ ಪೆಟ್ಟು ಬಿದ್ದಿದೆ. ಸ್ಥಳಕ್ಕೆ ದಕ್ಷಿಣ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.