ದಾವಣಗೆರೆ: ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಟೈರ್ ಸಿಡಿದ ರಭಸಕ್ಕೆ ಸೇತುವೆ ಮೇಲಿಂದ ಕಾರು ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಹುಣಸೇಕಟ್ಟೆ ಬಳಿ ಭಾನುವಾರ ರಾತ್ರಿ ನಡೆದಿದೆ.
ಜಿಲ್ಲೆಯ ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ನಿವಾಸಿ ಕೊಟ್ರೇಶಪ್ಪ (60) ಹುಬ್ಬಳ್ಳಿಯ ಈರಮ್ಮ (54) ಮೃತಪಟ್ಟವರು. ಪುಷ್ಪಾ ಎನ್ನುವವರಿಗೆ ಗಂಭೀರ ಗಾಯಗಳಾಗಿವೆ. ದಾವಣಗೆರೆಯ ಕೆಎಚ್‌ಬಿ ಕಾಲೊನಿಯ ನಿವಾಸಿ ಕೊಟ್ರೇಶಪ್ಪ ಮದುವೆ ಮುಗಿಸಿ ಕೊಂಡು ಈರಮ್ಮ ಅವರ ಜೊತೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ಕಾರಿನ ಟೈರ್ ಒಮ್ಮೆಲೆ ಸ್ಫೋಟಗೊಂಡಿದೆ. ಆಗ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕಾರು ಪಲ್ಟಿಯಾಗಿದೆ. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.