ದಾವಣಗೆರೆ: ಕಾಂಗ್ರೆಸ್ 60-70ಕ್ಕಿಂತ ಅಧಿಕ ಸ್ಥಾನಗಳನ್ನು ಪಡೆಯುವುದಿಲ್ಲ. ಜೆಡಿಎಸ್ 25 ದಾಟಲು ನಾವು ಬಿಡುವುದಿಲ್ಲ. ನಮ್ಮದು150 ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿಯಾಗಿತ್ತು. ಈಗಿನ ಸ್ಥಿತಿ ನೋಡಿದ್ರೆ 150 ಸ್ಥಾನ ಮೀರಿ ಗೆಲ್ಲಲಿದ್ದೇವೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಜಿಎಂಐಟಿಯ ಪಕ್ಕದಲ್ಲಿ ಮಾರ್ಚ್ 25ರಂದು ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮ ಕಾರ್ಯಕ್ರಮ ವೇದಿಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಯಡಿಯೂರಪ್ಪ ಅವರು ಕಡೆಗಣಿಸುವ ಪ್ರಶ್ನೆ ಇಲ್ಲ. ಅವರು ನಮ್ಮ ಸರ್ವೋಚ್ಛ ನಾಯಕ. ಅವರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದರು.
ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯಲ್ಲಿ ಧ್ವನಿಯೇ ಕೇಳಿಸುತ್ತಿಲ್ಲ. ಜೆಡಿಎಸ್‌ನ ಪಂಚರತ್ನ ಯಾತ್ರೆ ಹಾಸನದಲ್ಲಿಯೇ ಎಂಜಿನ್ ಸೀಜ್ ಆಗಿ ಉಳಿದಿದೆ ಎಂದು ಕಿಡಿಕಾರಿದರು. ದಾವಣಗೆರೆಯಲ್ಲಿ ನಡೆಯಲಿರುವ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ವಿಜಯ ಸಂಕಲ್ಪ ಯಾತ್ರೆ ಬಿಜೆಪಿಗೆ ಶಕ್ತಿ ತುಂಬಿದೆ ಎಂದರು.
ಕಾರ್ಯಕ್ರಮಕ್ಕೆ 10 ಲಕ್ಷ ಜನರನ್ನು ಸೇರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸುವ ಕಾರ್ಯವಾಗಬೇಕು. ಅದಕ್ಕಾಗಿ ಈ ಭಾಗದ ಕಾರ್ಯಕರ್ತರಷ್ಟೇ ಅಲ್ಲ, ನಾಯಕರು ಕೂಡ ಕೆಲಸ ಮಾಡಬೇಕು. ದಾವಣಗೆರೆ ಮಧ್ಯಕರ್ನಾಟಕ ಆಗಿರುವುದರಿಂದ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಹಮ್ಮಿಕೊಂಡಿದ್ದೇವೆ. ಇದು ಯಾರಿಗೂ ಸವಾಲು ಹಾಕಲು ಅಲ್ಲ ಎಂದರು.
ಸಂಸದರಾದ ಜಿ.ಎಂ. ಸಿದ್ದೇಶ್ವರ, ದೇವೇಂದ್ರಪ್ಪ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಎನ್.ಲಿಂಗಣ್ಣ, ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಅರುಣ್ ಕುಮಾರ್ ಪೂಜಾರ್, ಕೆ.ಎಸ್. ನವೀನ್, ಕೇಶವ ಪ್ರಸಾದ್, ಎಸ್.ವಿ. ರಾಮಚಂದ್ರ, ಹೇಮಲತಾ ನಾಯ್ಕ್, ತಿಪ್ಪಾರೆಡ್ಡಿ, ಆರ್. ಶಂಕರ್, ಮುಖಂಡರಾದ ಬಿ.ಪಿ. ಹರೀಶ್, ಶಿವಲಿಂಗಪ್ಪ, ಬಸವರಾಜ ನಾಯ್ಕ್, ಎ.ವೈ. ಪ್ರಕಾಶ್ ಮತ್ತಿತರರು ಇದ್ದರು.



