ದಾವಣಗೆರೆ: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಮತ್ತು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಹಿನ್ನೆಲೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಿಂದ ಉಪವಿಭಾಗಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರೈಲು ನಿಲ್ದಾಣದ ಮುಂಭಾಗದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರ ಸಾಂವಿಧಾನಿಕ ಹುದ್ದೆಗೆ ಅಗೌರವ ತೋರುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, ಸಚಿವರು ಮತ್ತು ಶಾಸಕರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು. ಮುಡಾ ಪ್ರಕರಣ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ರಾಜ್ಯಪಾಲರಿಗೆ ಅಗೌರವ ತೋರಿದ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಹಾಗೂ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು.
ಮುಡಾದಿಂದ ಬದಲಿ ನಿವೇಶನ ಪಡೆದ ಹಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾದ ಆರೋಪ ಕೇಳಿಬಂದಿದೆ. ರಾಜಭವನಕ್ಕೆ ಸಲ್ಲಿಕೆಯಾದ ದೂರು ಆಧರಿಸಿ ಥಾವರಚಂದ್ ಗೆಹ್ಲೋಟ್ ಅವರು ತನಿಖೆಗೆ ಅನುಮತಿ ನೀಡಿದ್ದಾರೆ. ಇದರಿಂದ ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಅಭಿವೃದ್ಧಿ ಕಾರ್ಯ ಮಾಡುವುದನ್ನು ಬಿಟ್ಟು ಭ್ರಷ್ಟಾಚಾರದಲ್ಲಿ ತೋಡಗಿದೆ. ಭ್ರಷ್ಟಾಚಾರ ಮಾಡಲು ಕಾಂಗ್ರೆಸ್‌ಗೆ ಜನಾದೇಶ ನೀಡಿಲ್ಲ. ರಾಜ್ಯದಲದಲಿ ಎಲ್ಲೆಡೆ ಭ್ರಷ್ಟಾಚಾರ ನಡೆಯುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣವನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಈ ಆಸ್ತಿಯನ್ನು ಚುನಾವಣೆಯ ನಾಮಪತ್ರಗಳಲ್ಲಿ ಘೋಷಣೆ ಮಾಡಿಕೊಂಡಿಲ್ಲ. ಸಾಮಾಜಿಕ ಕಾರ್ಯಕರ್ತರೊಬ್ಬರ ದೂರು ಆಧರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ಮಾಡಲು ಅವಕಾಶ ಇದೆ. ಇದನ್ನು ಬಿಟ್ಟು ರಾಜ್ಯಪಾಲರನ್ನು ಅವಹೇಳನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ನಿಮಗೆ ಧೈರ್ಯ ಇದ್ದರೆ ರಾಜಭವನಕ್ಕೆ ನುಗ್ಗಿ ಎಂದು ಸವಾಲು ಹಾಕಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದೆ. ಈ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ವೆಚ್ಚ ಮಾಡಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಿತ್ತು. ಸಿದ್ದರಾಮಯ್ಯ ಅವರಿಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿದೆ. ಐವಾನ್ ಡಿಸೋಜಾ ಹಾಗೂ ಜಮೀರ್ ಅಹಮ್ಮದ್ ಅವರ ವರ್ತನೆ ಭಯೋತ್ಪಾದಕರ ರೀತಿಯಲ್ಲಿದೆ. ಇವರ ವಿರುದ್ಧ ಭಯೋತ್ಪಾದನಾ ನಿಗ್ರಹ ದಳಕ್ಕೆ ದೂರು ಕೊಡಲು ನಿರ್ಧರಿಸಿದ್ದೇವೆ ಎಂದರು.
ಮಾಡಾಳ್ ಮಲ್ಲಿಕಾರ್ಜುನ ಮಾತನಾಡಿ, ಕಾಂಗ್ರೆಸ್ ನಾಯಕರು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ದೇಶದ್ರೋಹ ಎಸಗಿದ ಕಾಂಗ್ರೆಸ್ ಸರ್ಕಾರ ಶೀರ್ಘದಲ್ಲೇ ಪತನ ಆಗಲಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹನವಾಡಿ ವೀರೇಶ್, ಯಶವಂತರಾವ್ ಜಾಧವ್, ಶಿವಯೋಗಿಸ್ವಾಮಿ, ಬಿ.ಜೆ.ಅಜಯ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಪ್ರಸನ್ನಕುಮಾರ್, ಧನಂಜಯ್ ಕಡ್ಲೇಬಾಳು, ಬಿ.ಎಂ. ಸತೀಶ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.