ದಾವಣಗೆರೆ; ರಾಜ್ಯದಲ್ಲಿ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕಡಿತ ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಸರ್ಕಾರೆ ವಿರುದ್ಧ ಪ್ರತಿಭಟನೆ ನಡೆಸಿ, ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿರುವ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ರೈತರು, ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.ಈ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳಾದ ಬಿ. ಜೆ. ಅಜಯಕುಮಾರ್, ಎಸ್. ಟಿ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ಎ. ವೈ. ಪ್ರಕಾಶ್, ಲೋಕಿಕೆರೆ ನಾಗರಾಜ್, ಬಿ. ಎಂ. ಸತೀಶ್, ಮಾಯಕೊಂಡ ಬಿಜೆಪಿ ಯುವ ಮುಖಂಡ ಶ್ಯಾಮ್, ಕೊಂಡಜ್ಜಿ ಜಯಪ್ರಕಾಶ್, ಪಾಲಿಕೆ ಸದಸ್ಯ ಕೆ. ಎಂ. ವೀರೇಶ್ ಪೈಲ್ವಾನ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿರುವುದು ಕಳ್ಳ- ಮಳ್ಳ ಸರ್ಕರ. ಜನರಿಗೆ ನಿರಂತರ ವಿದ್ಯುತ್ ಕೊಡದೇ ಕತ್ತಲೆ ಭಾಗ್ಯ ತಂದಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಲೂಟಿ ಹೊಡೆಯುತ್ತಿರುವ ಈ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರಿಗೆ ಮಾತ್ರ 24ತಾಸು ಕರೆಂಟ್ ಸಿಗುತ್ತದೆ. ಕಾರಣ ಎಟಿಎಮ್ ಮಿಷನ್ ರೀತಿಯಲ್ಲಿ ಹಣ ವಸೂಲಿ ಮಾಡಬೇಕಲ್ಲ ಎಂದು ಆರೋಪಿಸಿದರು.
ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಮಾಡಿ ರಾಜ್ಯವನ್ನು ಕತ್ತಲೆ ಕೂಪಕ್ಕೆ ತಳ್ಳಿದೆ. ರೈತರಿಗೆ ಅನ್ಯಾಯ ಅಗುತ್ತಿದ್ದರೂ ಸಹ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ವಿದ್ಯುತ್ ಇಲ್ಲದೇ ರಾಜ್ಯದ ರೈತರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಸರ್ಕಾರವನ್ನು ಕಿತ್ತೊಗೆಯುವ ತನಕ ವಿಶ್ರಮಿಸಬಾರದು ಎಂದರು.