ದಾವಣಗೆರೆ: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಕರ್ನಾಟಕ ಬಂದ್ ಕರೆ ಹಿಂದೆ ಕಾಂಗ್ರೆಸ್‌ನ ಕೈವಾಡವಿದ್ದು, ಇದೊಂದು ಕಾಂಗ್ರೆಸ್ ಕೃಪಾಪೋಷಿತ ನಾಟಕ ಎಂದು ಮಾಯಕೊಂಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಬಿ.ಜಿ. ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ವಾಟಾಳ್ ನಾಗರಾಜ್ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ವಾಟಾಳ್ ನಾಗರಾಜ್, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ಏಕೆ ಮಾತನಾಡಲ್ಲ. ವಾಟಾಳ್ ಗೆ ಬೆಂಗಳೂರು, ವರುಣಾ ಕ್ಷೇತ್ರದಲ್ಲಿ ದೊಡ್ಡ ಡೊಡ್ಡ ಬಂಗಲೆಗಳು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ರಾಜ್ಯದಲ್ಲಿರುವ ಅಲ್ಪ ಸಂಖ್ಯಾತ ಮರಾಠರಿಗೆ ಹೊರತು, ಅನ್ಯ ರಾಜ್ಯಗಳ ಮರಾಠಿಗರಿಗಲ್ಲ. ಇದನ್ನು ವಾಟಾಳ್ ಸೇರಿ ಇತರೆ ಕನ್ನಡಪರ ಸಂಘಟನೆಗಳು ತಿಳಿಯಬೇಕಿದೆ ಎಂದರು.



