ದಾವಣಗೆರೆ: ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯದ 20 ಅಭ್ಯರ್ಥಿಗಳ ಪಟ್ಟಿಯಲ್ಲಿ ದಾವಣಗೆರೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ ಹೆಸರು ಘೋಷಣೆ ಅಂತಿಮಗೊಳಿಸಲಾಗಿದೆ. ಇದಕ್ಕೆ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನೇತೃತ್ವದ ರೆಬಲ್ ನಾಯಕರು ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ಅವರ ಮನೆಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.
ದಾವಣಗೆರೆ ಹೊರ ವಲಯದ ಶಿರಮಗೊಂಡನಹಳ್ಳಿಯ ರವೀಂದ್ರನಾಥ್ ಅವರ ಮನೆಯಲ್ಲಿ ಸಭೆ ಸೇರಲಾಗಿತ್ತು. ಈ ಬಾರಿಯ ಲೋಕಸಭೆಯಲ್ಲಿ ಬಂಡಾಯ ಅಭ್ಯರ್ಥಿ ನಿಲ್ಲಿಸುವ ಬಗದಗೆಯೂ ಸಮಾಲೋಚನೆ ನಡೆಸಿದ್ದಾರೆ. ಈ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆ ಎಂದು ಸಭೆ ಮೂಲಕ ಸಂದೇಶ ಸಾರಿದ್ದಾರೆ. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಉಪಸ್ಥಿತಿಯಲ್ಲಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಗುರುಸಿದ್ದನಗೌಡರ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಬಸವರಾಜ ನಾಯ್ಕ, ಮಾಡಾಳ್ ಮಲ್ಲಿಕಾರ್ಜುನ್,ಡಾ. ರವಿಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ಸಭೆ ಬಳಿಕ ಮಾತನಾಡಿದ ರೇಣುಕಾಚಾರ್ಯ, ಹಾಲಿ ಸಂಸದ ಸಿದ್ದೇಶ್ವರ ವಿರುದ್ಧ ವಾಗ್ದಾಳಿ ನಡೆಸಿದರು. ಈಗ ಘೋಷಿಸಿರುವ ಅಭ್ಯರ್ಥಿಯನ್ನು ಬದಲಾವಣೆ ಮಾಡಲೇಬೇಕು. ಪಕ್ಷ ಘೋಷಿಸಿರುವ ಅಭ್ಯರ್ಥಿಗೆ ನಮ್ಮ ಬೆಂಬಲ ಇಲ್ಲ. ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದೇವೆ. ಯಾರಿಗೂ ನೀಡಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ದೆಹಲಿ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಇನ್ನೊಮ್ಮೆ ಸಭೆ ಸೇರಿ ಪಕ್ಷೇತರರಾಗಿ ಕಣಕ್ಕಿಳಿಯಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ನಿರ್ಧಾರ ಮಾಡುತ್ತೇವೆ ಎಂದರು.



