ದಾವಣಗೆರೆ: ರಾಜ್ಯ ಬಿಜೆಪಿ ಭಿನ್ನಮತ ಮತ್ತೆ ಚುರುಕು ಪಡೆದಿದೆ. ವರಿಷ್ಠರು ಬಂದು ಹೋದ ಬಳಿಕ ಗುಂಪುಗಾರಿಕೆ ತಣ್ಣಗಾಯ್ತು ಎನ್ನುವಾಗಲೇ, ಮತ್ತೆ ಬಿಜೆಪಿಯಲ್ಲಿ ಬಣ ರಾಜಕೀಯ ಶುರುವಾಗಿದೆ. ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ವಿಜಯೇಂದ್ರ ಬೆಂಬಲಿಗರು ಶನಿವಾರ ತಡ ರಾತ್ರಿ ದಾವಣಗೆರೆ ಆಗಮಿಸಿದ್ದು, ಇಂದು ಮಹತ್ವದ ಸಭೆನಡೆಸಲು ಸಿದ್ಧತೆ ನಡೆಸಿದ್ದಾರೆ.
ಮಾಜಿ ಸಚಿವರಾದ ರೇಣುಕಾಚಾರ್ಯ ಹಾಗೂ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿ (ಜ.14) ದೊಡ್ಡ ಸಮಾವೇಶ ಮಾಡಿ ಪಕ್ಷದೊಳಗಿನ ವಿರೋಧಿಗಳಿಗೆ ಶಕ್ತಿ ಪ್ರದರ್ಶಿಸಬೇಕು. ಈ ಮೂಲಕ ವಿಜಯೇಂದ್ರರಿಗೆ ಬಲ ತುಂಬಬೇಕು ಎಂಬ ಉದ್ದೇಶದಿಂದಲೇ ಸಭೆ ಸೇರಲಾಗುತ್ತಿದೆ ಎಂಬ ಮಾಹಿತಿ ಇದೆ.
ಪಕ್ಷ ಸಂಘಟನೆ ನೆಪದಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು, ಮುಖಂಡರು ದಾವಣಗೆರೆಯತ್ತ ಮುಖ ಮಾಡಿದ್ದು, ಒಟ್ಟು 60ಕ್ಕೂ ಅಧಿಕ ಮಾಜಿಗಳು ಭಾಗವಹಿಸುವ ನಿರೀಕ್ಷೆ ಇದೆ.ದಾವಣಗೆರೆಯ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಭಾನುವಾರ ಬೆಳಗ್ಗೆ 11ಕ್ಕೆ ಸಭೆ ನಡೆಯಲಿದೆ. ಸಭೆಗೆ ಮುನ್ನ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಹಾಗೂ ದೊಡ್ಡಬಾತಿ ರೇವಣಸಿದ್ದೇಶ್ವರ ದೇವರ ದರ್ಶನ ಪಡೆದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಅವರ ತೋಟದ ಮನೆಯಲ್ಲಿ ಈ ತಂಡ ಉಪಾಹಾರ ಸೇವಿಸಲಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಬಲ ತುಂಬುವ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ. ಈಗಾಗಲೇ ಈ ಕುರಿತು ಆರು ಸಭೆ ನಡೆಸಿದ್ದು ಇದು ಏಳನೇ ಸಭೆಯಾಗಿದೆ. 40ಕ್ಕೂ ಹೆಚ್ಚು ಮಾಜಿ ಸಚಿವರು, ಮಾಜಿ ಶಾಸಕರು ಭಾಗಿಯಾಗುತ್ತಿದ್ದಾರೆ. ಬಿಜೆಪಿ ಸದೃಢ ಆಗಬೇಕು ಎಂಬ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದರು.
ಯಾರೆಲ್ಲಾ ಭಾಗಿ: ಎಂ.ಪಿ. ರೇಣುಕಾಚಾರ್ಯ, ಎಸ್.ವಿ. ರಾಮಚಂದ್ರಪ್ಪ , ಸಂಪಗಿ, ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ, ರಾಣಿಬೆನ್ನೂರು ಅರುಣಕುಮಾರ್ ಪೂಜಾರ, ಕೊಳ್ಳೆಗಾಲ ಮಹೇಶ್, ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮೂರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೆಟ್ಗುಡ್ಡ, ಸುರೇಶ್ ಮಾರಿಹಾಳ್. ವಿಶ್ವನಾಥ್ ಪಟೇಲ್, ಮಾಡಾಳು ಮಲ್ಲಿಕಾರ್ಜುನ್ , ಲೋಕಿಕೆರೆ ನಾಗರಾಜ್ , ಅಜಯ್ ಕುಮಾರ್
ಯಾರ ಉಚ್ಚಾಟನೆಗೂ ಸಭೆ ಸೇರಿಲ್ಲ; ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಆಗಿದ್ದು ಅವರ ನೇತೃತ್ವದಲ್ಲಿ 17 ಸಂಸದ ಸ್ಥಾನ ಗೆದ್ದಿದ್ದೇವೆ. ಮುಂದೆ ಪಕ್ಷವನ್ನ ಬಲಪಡಿಸಲು ಮಾಜಿ ಶಾಸಕರು ನಿರ್ಣಯಿಸಿ ಈ ಸಭೆ ನಡೆಸಿದ್ದೇವೆ. ಭಾನುವಾರ 11 ಗಂಟೆಗೆ ಮುಖ್ಯ ಸಭೆ ನಡೆಸುತ್ತೇವೆ. ಸಭೆ ಬಳಿಕ ನಿರ್ಣಯ ತಿಳಿಸುತ್ತೇವೆ. ಯಾರ ಉಚ್ಚಾಟನೆ ಮಾಡುವಂತೆ ಒತ್ತಾಯಿಸಲು ಈ ಸಭೆ ನಡೆಸುತ್ತಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.
ಪಕ್ಷದ ಬಲವರ್ಧನೆ ಉದ್ದೇಶದಿಂದ ಪಕ್ಷ ನಿಷ್ಠರಾದ ಮಾಜಿ ಸಚಿವರು,ಶಾಸಕರು, ಮುಖಂಡರು ದಾವಣಗೆರೆಯಲ್ಲಿ ಸಭೆ ಸೇರಿ ಚರ್ಚಿಸಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಿದ್ದೇವೆ. ಶಕ್ತಿ ಪ್ರದರ್ಶನಕ್ಕಾಗಲೀ, ಯಾರಿಗೋ ಸಂದೇಶ ರವಾನಿಸುವ ಉದ್ದೇಶ ನಮಗಿಲ್ಲ. ರಾಜ್ಯಾಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದು ಅವರ ಕೈ ಬಲಪಡಿಸಲು ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ ಎಂದರು.