ದಾವಣಗೆರೆ: ಕೆ.ಎಸ್. ಈಶ್ವರಪ್ಪ ಅಪರಾಧ ಮಾಡದೇ ರಾಜೀನಾಮೆ ನೀಡಿದ್ದಾರೆ. ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು, ನಿರಪರಾಧಿಯಾಗಿ ಮತ್ತೆ ಸಚಿವರಾಗಲಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ದಾವಣಗೆರೆಯಲ್ಲಿ ಬಿಜೆಪಿ ವಿಭಾಗ ಮಟ್ಟದ ಕಾರ್ಯಕಾರಿಣಿಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹುಬ್ಬಳ್ಳಿ ಘಟನೆಯಲ್ಲಿ ಪ್ರಚೋದನಕಾರಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಒಂದು ಗಂಟೆಯ ಒಳಗೆ ಬಂಧಿಸಲಾಗಿದೆ. ಇಷ್ಟರಲ್ಲಿಯೇ ಮುಸ್ಲಿಮರು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದು, 12 ಪೊಲೀಸರಿಗೆ ಗಾಯ, ಇನ್‌ಸ್ಪೆಕ್ಟರ್ ತಲೆ ಒಡೆದಿದೆ. ಅಮಾಯಕರನ್ನು ಬಂಧಿಸಬೇಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದು, ಯಾರು ಅಮಾಯಕರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಇಂತಹ ಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇದು ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಸತ್ಯ ತಿಳಿದು ಮಾತನಾಡಲಿ.ಆರಗ ಜ್ಞಾನೇಂದ್ರ ಅವರು ಗೃಹಸಚಿವರಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಅವರು ದೆಹಲಿಗೆ ಹೋಗಿ ವರಿಷ್ಠರ ಜತೆಗೆ ಚರ್ಚಿಸಲಿದ್ದಾರೆ. ಸಂಪುಟಕ್ಕೆ ಯಾರನ್ನು ಬದಲಾಯಿಸಬೇಕು? ಯಾರನ್ನು ಹೊಸತಾಗಿ ಸೇರಿಸಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.
ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲ ಕಾಂಗ್ರೆಸ್‌ನಲ್ಲಿದ್ದವರು. ಅವರು ಕಾಮಗಾರಿಯನ್ನೇ ಮಾಡಿಲ್ಲ. ಬೇರೆ 10 ಮಂದಿ ಕಾಮಗಾರಿ ಮಾಡಿದ್ದಾರೆ. ಅವರು ಹಣ ಹಾಕಿ ಕಾಮಗಾರಿ ಮಾಡಿದ್ದಾರೆಯೇ ವಿನಃ ಸಂತೋಷ್ ಪಾಟೀಲ ಅಲ್ಲ ಎಂದು ಅಶೋಕ್ ಹೇಳಿದರು.
ವರ್ಕ್ ಆರ್ಡರ್ ಇಲ್ಲ, ಟೆಂಡರ್ ಇಲ್ಲ, ಯಾವುದೇ ಅನುಮೋದನೆ ಇಲ್ಲ. ಯಾವುದೂ ಇಲ್ಲದೇ ಹೇಗೆ ಕಾಮಗಾರಿ ಮಾಡಿದ್ದಾರೆ. ತನಿಖೆ ಮುಗಿಯಲಿ ಆಮೇಲೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಎಂ.ಪಿ. ರೇಣುಕಾಚಾರ್ಯ, ಕೆ.ಎಸ್. ನವೀನ್, ಎನ್. ರವಿಕುಮಾರ್, ಮುಖಂಡ ಮಾಲೀಕಯ್ಯ ಗುತ್ತೇದಾರ್, ಎಂ. ಶಂಕರಪ್ಪ, ಶಿವಲಿಂಗಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಡಿ.ಎಸ್. ಶಿವಶಂಕರ್ ಇದ್ದರು.