ದಾವಣಗೆರೆ: ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಈ ಬಾರಿ ದಾವಣಗೆರೆಯಲ್ಲಿ ಆಯೋಜನೆ ಆಗಿರುವುದು ಸಂತಸ ತಂದಿದೆ. ಬೆಣ್ಣೆನಗರಿ ದಾವಣಗೆರೆಯಲ್ಲಿ ಸೆ.18 ಮತ್ತು 19 ರಂದು ಎರಡು ದಿನ ಕಾರ್ಯಕಾರಣಿ ನಡೆಯಲಿದ್ದು, ಭವ್ಯ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ 71 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ 71 ಪೂರ್ಣ ಕುಂಬ ಮೇಳದೊಂದಿಗೆ ಕಾರ್ಯಕಾರಿಣಿಗೆ ನಾಯಕರನ್ನು ಸ್ವಾಗತಿಸಲಾಗುವುದು. ನಗರದಾದ್ಯಂತ ಈಗಾಗಲೇ ಪಕ್ಷದ ಧ್ವಜ, ಫ್ಲೈಕ್ಸ್, ಬ್ಯಾನರ್ ಗಳಿಂದ ಅಲಂಕಾರಗೊಳಿಸಲಾಗಿದೆ. ಕಾರ್ಯಕಾರಣಿಗೆ ಬರುವ ನಾಯಕರಿಗೆ ದಾವಣಗೆರೆ ಬೆಣ್ಣೆ ದೋಸೆ, ಮಂಡಕ್ಕಿ, ಮಿಡ್ಚಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಜತೆ ಗೋಧಿ ಪಾಯಸದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ನಾಳೆ (ಸೆ.18) ಸಂಜೆ ರಾಜ್ಯ ಕಾರ್ಯಕಾರಣಿಗೆ ಅಪೂರ್ವ ಹೋಟೆಲ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶಟ್ಟರ್, ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರು ಸೇರಿ 574 ಜನ ಅಪೇಕ್ಷಿತರು ಕಾರ್ಯಕಾರಣಿಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಕಾರ್ಯಕಾರಣಿಯಲ್ಲಿ ಪಕ್ಷದ ಸಂಘಟನೆ, ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ . ಸೆ. 19 ರಂದು ತ್ರಿಶೂಲ ಭವನದಲ್ಲಿ ಬೆಳಗ್ಗೆ ಧ್ವಜರೋಹಣ ನಡೆಯಲಿದೆ. ನಂತರ ಸಭೆಯ ನಡಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಶಾಸಕ ಬಸವರಾಜ ನಾಯ್ಕ್, ದೂಢಾ ಅಧ್ಯಕ್ಷ ಶಿವಕುಮಾರ್ ದೇವರಮನಿ, ಮೇಯರ್ ಎಸ್.ಟಿ. ವೀರೇಶ್, ಯಶವಂತರಾವ್ ಜಾಧವ್, ಶಿವಶಂಕರ್, ಶ್ರೀವಾಸ್ ದಾಸಕರಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.