ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಮ್ಮ ಶಾಸಕರಿಗೆ ತಲಾ 50 ಕೋಟಿ ಕೊಟ್ಟು ಸರ್ಕಾರ ಬೀಳಿಸಲು ಬಿಜೆಪಿಯವರು ಯತ್ನಿಸಿದ್ದರು. ದಾವಣಗೆರೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮೂಲಕ ಸಂಪರ್ಕಿಸಿದ್ದರು ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿದ್ದರು. ಈ ಆರೋಪವನ್ನು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ತಳ್ಳಿ ಹಾಕಿದ್ದಾರೆ. ಇದೆಲ್ಲ ಸುಳ್ಳು ಆರೋಪ ಎಂದಿದ್ದಾರೆ.
ಶಿಕ್ಷಕರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಡಿಸಿಎಂ ಶಿವಕುಮಾರ್, ನಿಮ್ಮ ಪಕ್ಷದ ನಾಯಕರು ಸರ್ಕಾರ ಬೀಳಿಸುವ ವಿಚಾರದಲ್ಲಿ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ತಿಳಿಸಲು ಬಯಸುತ್ತೇನೆ. ನಾವು ಜನಾಶೀರ್ವಾದದಿಂದ 135 ಕ್ಷೇತ್ರಗಳನ್ನು ಗೆದ್ದಿದ್ದೇವೆ. ಅಲ್ಲದೆ, ಮೂವರು ಪಕ್ಷೇತರರ ಬೆಂಬಲವಿದೆ ಎಂದಿದ್ದರು.
ಆಪರೇಷನ್ ಕಮಲ ಸುಳ್ಳು, ನನ್ನನ್ನು ಯಾರೂ ಭೇಟಿ ಮಾಡಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ದಾರೆ. ನನ್ನ ಹತ್ತಿರ ಯಾರೂ ಬಂದಿಲ್ಲ. ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದರೆ ಅವರನ್ನೇ ಕೇಳಿ. ಸರ್ಕಾರ ಬೀಳಿಸಲು ನನ್ನ ಸಹಾಯವನ್ನು ಯಾರೂ ಕೇಳಿಲ್ಲ. ಶಿವಕುಮಾರ್ ಹೇಳಿರುವುದು ಸುಳ್ಳು.
ನನಗೆ ದುಡ್ಡು ಕೊಟ್ಟಿದ್ದರೆ ಎಣಿಸಿಕೊಂಡು ಇಟ್ಟುಕೊಳ್ಳುತ್ತಿದ್ದೆ. ಬಿಜೆಪಿಯವರು, ಜೆಡಿಎಸ್‌ನವರು ಹಾಗೂ ಕಾಂಗ್ರೆಸ್‌ನವರು ಸೇರಿದಂತೆ ಯಾರೂ ಬಂದಿಲ್ಲ. ಹಣದ ಆಮೀಷ ಯಾರೂ ಒಡ್ಡಿಲ್ಲ. ಸರ್ಕಾರ ಪತನಗೊಳಿಸಲು ನನ್ನನ್ನು ಸಂಪರ್ಕಿಸಿದ್ದರು ಎಂಬ ಮಾತು ಹೇಳಿರುವ ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ. ನನ್ನನ್ನು ಏನು ಕೇಳುತ್ತೀರಾ… ರಾಜ್ಯಸಭೆ ಚುನಾವಣೆ ವೇಳೆ ಸಹಾಯ ಮಾಡುವಂತೆ ಕೇಳಿದರು. ದುಡ್ಡು ಕೊಡುತ್ತೇವೆ ಎಂದು ಯಾರೂ ಹೇಳಿಲ್ಲ. ನಾವು ಮತ ಕೇಳಬೇಡಿ, ದುಡ್ಡು ಬೇಕಾದರೆ ನಾವೇ ಸಹಾಯ ಮಾಡುತ್ತೇವೆ ಎಂದು ಹೇಳಿದ್ದೆ. ಆದರೆ ನಮ್ಮ ಮತಗಳನ್ನು ಕೇಳಬೇಡಿ ಎಂದು ಹೇಳಿದ್ದು ನಿಜ. ಆದ್ರೆ, ಹಣದ ಆಮಿಷ ಯಾರೂ ಒಡ್ಡಿಲ್ಲ ಎಂದು ಸ್ಪಷ್ಟಪಡಿಸಿದರು.



