ದಾವಣಗೆರೆ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಭೀತಿ ನಡುವೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಸುತ್ತ ಮುತ್ತಲಿನ ಪೌಲ್ಟ್ರಿ ಫಾರಂನಲ್ಲಿ ಸಾವಿರಾರು ಕೋಳಿಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ. ಇದರಿಂದ ಜಿಲ್ಲೆಯಲ್ಲಿ ಹಕ್ಕಿ ಜ್ವರ ಭೀತಿ ಎದುರಾಗಿದೆ.
ಕೊಂಡಜ್ಜಿ, ಬುಳ್ಳಾಪುರ, ಕೆಂಚನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೋಳಿಗಳು ಇದ್ದಕ್ಕಿದ್ದಂತೆ ಸಾಯುತ್ತಿವೆ. ಈ ಬಗ್ಗೆ ಆತಂಕಗೊಂಡ ಗ್ರಾಮಸ್ಥರು ಚೀಲದಲ್ಲಿ ತುಂಬಿಕೊಂಡು ಹೋಗಿ, ಕೊಂಡಜ್ಜಿ ಗುಡ್ಡದಲ್ಲಿ ಎಸೆದು ಬರುತ್ತಿದ್ದಾರೆ.ಪ್ಲಾಸ್ಟಿಕ್ ಚೀಲಗಳಲ್ಲಿ ಸತ್ತ ಕೋಳಿಗಳನ್ನು ವಿಲೇವಾರಿ ಮಾಡುತ್ತಿದ್ದರು. ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಇದರ ಮಾಹಿತಿ ಇಲ್ಲ.
ಕಳೆದ ಎಂಟು ದಿನಗಳಲ್ಲಿ 8 ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ. ಪೌಲ್ಟ್ರಿ ಫಾರಂ ಮಾಲೀಕರು, ವ್ಯಾಪರಸ್ಥರು ಹಕ್ಕಿಜ್ವರವನ್ನು ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ. ಕೋಳಿಗಳು ಸಾಯುತ್ತಿರುವ ವಿಷಯ ಪಶು ಆರೋಗ್ಯ ಇಲಾಖೆ ಬಳಿ ಮಾಹಿತಿ ಇಲ್ಲದಾಗಿದೆ.
ಕೋಳಿಗಳು ನಿಗೂಢವಾಗಿ ಸಾಯುತ್ತಿರುವುದರಿಂದ ರಾತ್ರೋ ರಾತ್ರಿ ಕೋಳಿ ಫಾರಂಗಳು ಬರಿದಾಗುತ್ತಿವೆ. ಇದರಿಂದ ಪೌಲ್ಟ್ರಿ ಮಾಲೀಕರಿಗೆ ಲಕ್ಷಾಂತರ ರೂ.ನಷ್ಟ ಉಂಟಾಗಿದೆ. ಆದರೆ, ಹಕ್ಕಿಜ್ವರದ ಶಂಕೆಯ ಮಾಹಿತಿ ಮುಚ್ಚಿಡುತ್ತಿರುವ ಪ್ರಯತ್ನವನ್ನ ಪೌಲ್ಟ್ರಿ ಮಾಲೀಕರು ಮಾಡುತ್ತಿದ್ದಾರೆ. ಸಾವಿರಾರು ಕೋಳಿ ಸತ್ತರೂ ಕೂಡ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಇಲ್ಲ. ಇಷ್ಟೆಲ್ಲಾ ಆದ್ರೂ ಪಶು ವೈದ್ಯಕೀಯ ಅಧಿಕಾರ ವರ್ಗ ಮಾತ್ರ ಸತ್ತ ಕೋಳಿಗಳನ್ನು ಲ್ಯಾಬ್‌ಗೆ ಕಳಿಸಿಲ್ಲ.