ದಾವಣಗೆರೆ: ಭದ್ರಾ ಜಲಾಶಯ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯ ಒಳಹರಿವು ಹೆಚ್ಚಳವಾಗಿದೆ. ಜಲಾಶಯ ಸುರಕ್ಷತೆ ದೃಷ್ಠಿಯಿಂದ ಒಳ ಹರಿವಿನ ಪ್ರಮಾಣದಷ್ಟು ನೀರನ್ನು ನದಿಗೆ ಯಾವ ಸಮಯದಲ್ಲಾದರೂ ಬಿಡಲು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್. ರವಿಚಂದ್ರ, ಭದ್ರಾ ಜಲಾಶಯದ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಸಾಕಷ್ಟು ಒಳಹರಿವು ಆಗುತ್ತಿದೆ ಮತ್ತು ನೀರಿನ ಸಂಗ್ರಹ ಮಟ್ಟವು ಹೆಚ್ಚಾಗತೊಡಗಿದೆ. ಹರಿದು ಬರುವ ಒಳಹರಿವಿನ ಪ್ರಮಾಣ 20000-25000 ಕ್ಯೂಸೆಕ್ಸ್ ಇದ್ದು, ಆಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ Spill Way Gate ಮುಖಾಂತರ ನದಿಗೆ
ಬಿಡಲಾಗುವುದು.
ಈ ಹಿನ್ನೆಲೆಯಲ್ಲಿ ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಿ ಈ ಮೂಲಕ ಕೋರಲಾಗಿದೆ. ನದಿ ಪಾತ್ರದಲ್ಲಿ ಸಾರ್ವಜನಿಕರು
ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ.