ದಾವಣಗೆರೆ: ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಯಡಿ ತರೀಕೆರೆ ಏತ ನೀರಾವರಿ ಮತ್ತು ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವುದನ್ನು ವಿರೋಧಿಸಿ ಜಿಲ್ಲಾ ರೈತರು ಇಂದು( ಡಿ. 28) ಪ್ರತಿಭಟನೆ ನಡೆಸಿದರು. ನಗರದ ಜಲ ಸಂಪನ್ಮೂಲ ಇಲಾಖೆಯ ಎದರು ಬೃಹತ್ ಪ್ರತಿಭಟನೆ ನಡೆಸಿದ ರೈತರು, ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.
ಭದ್ರಾ ಜಲಾಶಯ ನೀರಿನ ಮಟ್ಟ ತೀವ್ರ ಕುಸಿಯುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಿಗೆ ಹಂಗಾಮಿಗೆ ಎಷ್ಟು ದಿನ ನೀರು ಹರಿಸಲಾಗುತ್ತಿದೆ ಎಂಬ ಮಾಹಿತಿ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದು ಎಷ್ಟು ಸರಿ..? ಭದ್ರಾ ಅಣೆಕಟ್ಟೆಯ ನೀರನ ಒಳ ಹರಿವಿನ ಪ್ರಮಾಣ ಹೆಚ್ಚಾದ ನಂತರ ಮತ್ತು ನೀರಿನ ಲಭ್ಯತೆ ನೋಡಿಕೊಂಡು ನೀರು ಹರಿಸಬೇಕೆಂಬ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ಆದೇಶವಿದೆ. ಈ ಆದೇಶ ಪಾಲಿಸದೇ ಅಧಿಕಾರಿಗಳು ನೀರು ಬಿಡಲು ಸಿದ್ಧತೆ ಮಾಡಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಭದ್ರಾ ಅಧೀಕ್ಷಕ ಅಭಿಯಂತರರು ತರೀಕೆರೆ, ಕಡೂರು ಭಾಗದ ರೈತರು, ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸುವ ಸಲುವಾಗಿ ಡಿ.29ರಿಂದ ಪ್ರತಿದಿನ 700 ಕ್ಯೂಸೆಕ್ಸ್‌ನಂತೆ 4 ದಿನ ನೀರು ಬಿಡುವುದಾಗಿ ಘೋಷಣೆ ಮಾಡಿದ್ದು, ಇದರಿಂದ ಜಿಲ್ಲೆಯಅಚ್ಚುಕಟ್ಟು ರೈತರಿಗೆ ಅನ್ಯಾಯವಾಗಲಿದೆ ಎಂದು ರೈತರು ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ತೇಜಸ್ವಿ ಪಟೇಲ್ , ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಬೆಳವನೂರು ಬಿ.ನಾಗೇಶ್ವರ ರಾವ್, ಧನಂಜಯ ಕಡ್ಲೆಬಾಳ್ ಸೇರಿದಂತೆ ರೈತರು ಪಾಲ್ಲೊಂಡಿದ್ದರು.