ದಾವಣಗೆರೆ: ಜಿಲ್ಲೆಯ ರೈತರ ಜೀವನಾಡಿಯಾದ ಭದ್ರಾ ಜಲಾಶಯ ಬಲ ದಂಡೆ ನಾಲೆ ಸೀಳಿ ಹೊಸದುರ್ಗ, ತರೀಕೆರೆ, ಕಡೂರು ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಕೊಂಡೊಯ್ಯುವ ಯೋಜನೆಗೆ ಜಿಲ್ಲೆಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಈ ಹಿನ್ನಲೆಯಲ್ಲಿ ಶೀಘ್ರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಹಾಗೂ ಜಲ ಸಂಪನ್ಮೂಲ ಸಚಿವರ ಗಮನಕ್ಕೆ ತರಲಾಗುವುದ ಎಂದು ಜಿಲ್ಲ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ತಿಳಿಸಿದರು.
ಕಾಮಗಾರಿ ಅವೈಜ್ಞಾನಿಕ
ಭದ್ರಾ ಅಚ್ಚುಕಟ್ಟು ಭಾಗದ ರೈತರಗಳ ಮನವಿಗೆ ಸ್ಪಂದಿಸಿ ಮಾತನಾಡಿದ ಅವರು, ಭದ್ರಾ ಅಚ್ಚುಕಟ್ಟು ಭಾಗದ ರೈತರಿಗೆ ಸಮಸ್ಯೆ ಆಗದಂತೆ ನಿಮ್ಮೊಂದಿಗೆ ನಾವಿದ್ದೇವೆ ಲ. 2020 ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಲ ಸಂಪನ್ಮೂಲ ಇಲಾಖೆ ಅಧ್ಯಕ್ಷತೆಯಲ್ಲಿ ಸಭೆ ನಡೆದ ತೀರ್ಮಾನದಂತೆ, ಚಿತ್ರದುರ್ಗ ಜಿಲ್ಲೆಯ ಕೆಲವು ಪಟ್ಟಣಗಳು ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಕೆಲವು ಗ್ರಾಮಗಳ ಕುಡಿಯುವ ನೀರಿಗೆ ಯೋಜನೆ ರೂಪಿಸಲಾಗಿದ್ದು, ಪ್ರಸ್ತುತ ಕಾಮಗಾರಿಯನ್ನು ಕೈ ಗೆತ್ತಿಕೊಳ್ಳಲಾಗಿದೆ. ಆದರೆ ಕಾಮಗಾರಿಯು ಅವೈಜ್ಞಾನಿಕವಾಗಿದೆ ಎನ್ನುವುದು ರೈತರ ಅಭಿಪ್ರಾಯ. ಈ ಕಾಮಗಾರಿಯನ್ನು ತಡೆ ಹಿಡಿಯುವಂತೆ ಈ ಹಿಂದೆಯೇ ಕೋರಿದ್ದೇವು ಎಂದರು.
ಬಲದಂಡೆ ನಾಲೆ ರೈತರಿಗೆ ಮಾರಕ
ಕುಡಿಯುವ ನೀರಿನ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ಭದ್ರಾ ಬಲದಂಡೆಯ ನಾಲೆ ಸೀಳಿ ನೀರು ತೆಗೆದುಕೊಂಡು ಹೋಗುವ ವಿಚಾರಕ್ಕೆ ವಿರೋಧವಿದೆ. 9 ತಿಂಗಳುಗಳ ಜಲಾಶಯದ ಕ್ಯಾನಲ್ ನಿಂದ ಗ್ರಾವಟಿ ಮೂಲಕ ತೆಗೆದು ಕೊಳ್ಳುವುದು. ಕ್ಯಾನಲ್ ನಲ್ಲಿ ನೀರು ಲಭ್ಯವಿಲ್ಲದಿರುವ ಮೂರು ತಿಂಗಳ ಅವಧಿಯಲ್ಲಿ ಭದ್ರಾ ಜಲಾಶಯ ಹಿನ್ನಿರಿನಲ್ಲಿ ಕಾಮನ್ ಇಂಟ್ಯಾಕ್ ಜಾಕ್ ವೆಲ್ ನಿರ್ಮಿಸಿ ಪಂಪಿಂಗ್ ಮೂಲಕ ನೀರನ್ನು ತೆಗೆದುಕೊಳ್ಳುವುದರಿಂದ ಸರ್ಕಾರಕ್ಕೆ 9 ತಿಂಗಳು ವಿದ್ಯುತ್ ಶುಲ್ಕ ಉಳಿತಾಯ ಮತ್ತು ಗ್ರಾವಿಟಿ ಪ್ಲೋವನ್ನು ಸಮರ್ಥವಾಗಿ ಬಳಸಬಹುದಾಗಿದೆ ಎಂದು ತಿಳಿಸಲಾಗಿರುವುದು ಬಲದಂಡೆ ನಾಲೆ ರೈತರಿಗೆ ಮಾರಕವಾಗಲಿದೆ ಎಂದರು.
ಭದ್ರಾ ನದಿಯಿಂದ ನೀರು ತೆಗೆದುಕೊಳ್ಳಲಿ
ಜಲಾಶಯದ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿ ಭದ್ರಾ ನದಿ ಇದ್ದು ಇಲ್ಲಿ ನೀರಿನ ಪ್ರಮಾಣ 365 ದಿನವು ಹರಿವು ಇರುವ ಕಾರಣ ನದಿ ಭಾಗದಿಂದ ಜಾಕ್‌ವೆಲ್ ನಿರ್ಮಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದ್ದಲ್ಲಿ ಭದ್ರಾ ಅಚ್ಚು ಕಟ್ಟಿನ ರೈತರಿಗೆ ಬೆಳೆ ಬೆಳೆಯಲು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭದ್ರಾ ಮಹಾಮಂಡಳಿಯ ಅಧ್ಯಕ್ಷ ದ್ಯಾವಪ್ಪರೆಡ್ಡಿ, ಮುದೇಗೌಡ್ರು ಗಿರೀಶ್, ಮಾನಗಹಳ್ಳಿ ಪರಶುರಾಮ್, ನಂದಿಗಾವಿ ಶ್ರೀನಿವಾಸ್, ಕಾಡಾ ಮಾಜಿ ನಿರ್ದೆಶಕು ಕೆ.ಆಂಜನೇಯ, ತಿಪ್ಪೆರುದ್ರಪ್ಪ ಸಿರಿಗೆರೆ, ಪ್ರಭು ಸಿರಿಗೆರೆ, ರೈತ ಸಂಘದ ಅಧ್ಯಕ್ಷ ನಂದಿತಾವರೆ ಮುರುಗೇಂದ್ರಪ್ಪ, ಹಳೇಬಾತಿ ಶಾಂತಪ್ಪ, ರವಿ, ಮಂಜುನಾಥ ರೆಡ್ಡಿ ಸೇರಿ ಹರಿಹರ, ದಾವಣಗೆರೆ ತಾಲ್ಲೂಕು ರೈತರು ಭಾಗಿಯಾಗಿದ್ದರು.