ದಾವಣಗೆರೆ: ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಭಾರೀ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಳವಾಗಿದೆ. ಎಂಟತ್ತು ದಿನದ ಹಿಂದೆ ಮಳೆ ಕೊರತೆಯಿಂದ ಈ ವರ್ಷವೂ ಕಳೆದ ವರ್ಷದಂತೆ ಬರಗಾಲ ಗ್ಯಾರಂಟಿ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಎಂಟೇ ದಿನದಲ್ಲಿ ಲಕ್ಕವಳ್ಳಿಯ ಭದ್ರಾ ಜಲಾಶಯ ವಾತಾವರಣ ಬದಲಾಗಿದೆ. ಕೇವಲ ಎಂಟು ದಿನದಲ್ಲಿ ನೀರು ಸಂಗ್ರಹ 12 ಅಡಿ ಹೆಚ್ಚಾಗಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದ ಭತ್ತ, ಅಡಿಕೆ, ತೆಂಗು, ಮೆಕ್ಕೆಜೋಳ ಬೆಳೆಗಾರರಲ್ಲಿ ಡ್ಯಾಂ ಭರ್ತಿಯಾಗಿ ನಾಲೆಗೆ ನೀರು ಹರಿಯುವ ಆತ್ಮವಿಶ್ವಾಸ ಹೆಚ್ಚಾಗಿದೆ.
ಭದ್ರಾ ಜಲಾಶಯ ಒಟ್ಟು ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಜು.16) ನೀರಿನ ಮಟ್ಟ 144.7 ಅಡಿಯಷ್ಟಿದೆ. ಒಳ ಹರಿವು 27,839 ಕ್ಯೂಸೆಕ್ ನಷ್ಟಿದೆ. ಜುಲೈ 8ರಂದು 133.1 ಅಡಿ ನೀರಿನ ಸಂಗ್ರಹ ಇತ್ತು. ಈ ಮೂಲಕ ಎಂಟು ದಿನದಲ್ಲಿ 11.6 ಅಡಿ ನೀರು ಏರಿಕೆಯಾಗಿದೆ.
ಸೋಮವಾರ 141.3 ಅಡಿ ಇದ್ದು, ಒಳ ಹರಿವು 16,041 ಕ್ಯುಸೆಕ್ ಇತ್ತು. ಭಾನುವಾರ 14,150 ಕ್ಯುಸೆಕ್ ನೀರು ಹರಿದು ಬಂದಿತ್ತು. ಈ ಬಾರಿ ಮಳೆ ಕೊರತೆಯಿಂದ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಕಳೆದ ವರ್ಷದ ಸ್ಥಿತಿಯೇ ಈ ವರ್ಷ ಪುನರಾವರ್ತನೆ ಆಗಲಿದೆ ಎನ್ನುವಷ್ಟರಲ್ಲಿ ಎಂಟೇ ದಿನದಲ್ಲಿ ವಾತಾವರಣ ಬದಲಾಗಿದೆ. ಈಗ ಭಾರೀ ಮಳೆಯಿಂದ ಜಲಾಶಯ ಭರ್ತಿ ಆಗುತ್ತಿರುವುದು ಅಚ್ಚುಕಟ್ಟು ಪ್ರದೇಶದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
186 ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಭದ್ರಾ ಜಲಾಶಯ ಭರ್ತಿ ಆಗಲು ಇನ್ನೂ 42 ಅಡಿ ನೀರು ಅಗತ್ಯವಿದೆ. ಕಳೆದ ವರ್ಷವೂ ಇದೇ ಅವಧಿಯಲ್ಲಿ ಜಲಾಶಯದಲ್ಲಿ ಇಷ್ಟೇ ನೀರಿನ ಸಂಗ್ರಹ 141.3 ಅಡಿಯಷ್ಟು ಇತ್ತು. ಎರಡು ವರ್ಷಗಳ ಹಿಂದೆ ಭಾರಿ ಮಳೆಯಾಗಿದ್ದರಿಂದ ಜಲಾಶಯ ಈ ವೇಳೆಗೆ ಭರ್ತಿಯ ಹಂತಕ್ಕೆ ತಲುಪಿತ್ತು. 2022ರ ಜುಲೈ 15ರಂದು ಜಲಾಶಯದಲ್ಲಿ 184.6 ಅಡಿ ನೀರಿನ ಸಂಗ್ರಹ ಇತ್ತು. ಆ ದಿನ ಜಲಾಶಯಕ್ಕೆ ಒಳಹರಿವು 61,831 ಕ್ಯೂಸೆಕ್ ಇತ್ತು.
ಸಾಮಾನ್ಯವಾಗಿ ಭದ್ರಾ ಜಲಾಶಯ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿಯೇ ಭರ್ತಿ ಆಗುವುದು ವಾಡಿಕೆ. ಮುಂಗಾರು- ಹಿಂಗಾರು ಮಳೆ ನವೆಂಬರ್‌ವರೆಗೂ ಬೀಳುತ್ತದೆ. ಹೀಗಾಗಿ ಈ ಬಾರಿ ಭದ್ರೆ ಭರ್ತಿಯಾಗಲಿದೆ ಎಂಬುದು ರೈತರ ವಿಶ್ವಾಸ.



