ದಾವಣಗೆರೆ: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಭದ್ರಾ ಅಚ್ಚುಕಟ್ಟಿನ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ಒತ್ತಾಯಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಹೆಚ್.ಆರ್.ಬಸವರಾಜಪ್ಪ, ತುಂಗಭದ್ರಾ ಡ್ಯಾಮ್‌ನ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ 6 ಟಿಎಂಸಿ ನೀರು ನೀಡುವಂತೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಕೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಂದು ಮುಖ್ಯಮಂತ್ರಿಗಳು ಸಭೆ ಕರೆದಿದ್ದು ಯಾವುದೇ ಕಾರಣಕ್ಕೂ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು.
ಒಂದು ವೇಳೆ ರಾಜ್ಯ ಸರ್ಕಾರ ಒತ್ತಡಕ್ಕೆ ಮಣಿದು ಭದ್ರಾ ಜಲಾಶಯದಿಂದ ನೀರು ಹರಿಸಿದರೆ, ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಬೆಳೆಗೆ ನೀರು ಇಲ್ಲವಾಗುತ್ತದೆ. ಲಕ್ಷಾಂತರ ಎಕರೆ ಭತ್ತದ ಬೆಳೆ ನಾಶವಾಗಲಿದೆ. ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಮಹಾಮಂಡಳದ ನಿರ್ದೇಶಕ ಮುದೇಗೌಡ್ರ ಗಿರೀಶ್ ಮಾತನಾಡಿ, ಈಗ ಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ವಿವಿಧ ಕಾರಣಕ್ಕೆ ಹಂಚಿಕೆಯಾಗಿರುವ ನೀರಿನಲ್ಲಿ ಭದ್ರಾ ಜಲಾಶಯದ ವ್ಯಾಪ್ತಿಯ ರೈತರಿಗೆ ಕೊರತೆಯಾಗಲಿದೆ. ರೈತರ ವಿರೋಧದ ಮಧ್ಯೆಯು ಸರ್ಕಾರ ತುಂಗಭದ್ರಾ ಜಲಾಶಯಕ್ಕೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ನೀರು ನೀಡಿದರೆ ರೈತರ ಕುತ್ತಿಗೆ ಹಿಸುಕಿದಂತಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಆಗ್ರಹಿಸಿದರು. ಮಹಾಮಂಡಳದ ಬಾಬುರೆಡ್ಡಿ, ಹೊನ್ನೂರು ಮುನಿಯಪ್ಪ, ಕರಿಬಸಪ್ಪ, ಹಾಲೇಶ್, ದೇವೇಂದ್ರಪ್ಪ, ತಿಪ್ಪೇರುದ್ರಪ್ಪ, ಟಿ.ಪಿ.ಬಂಧು ಹಾಜರಿದ್ದರು.



