ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ನದಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೇ.22ರ ರಾತ್ರಿ 10 ಗಂಟೆಯಿಂದ ಮೇ 28ರವರೆಗೆ ಪ್ರತಿ ದಿನ 2,000 ಕೂಸೆಕ್ಸ್ ನೀರು ಹರಿಸಲು ಸರ್ಕಾರ ಆದೇಶಿಸಿದೆ.
ಗದಗ, ಹಾವೇರಿ ಜಿಲ್ಲಾ ವ್ಯಾಪ್ತಿಗೆ ಬರುವ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ನದಿಗೆ ನೀರು ಹರಿಸಲಾಗುತ್ತಿದೆ. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲಿ, ಇತರೆ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ ರೈತರು ನದಿ ದಂಡೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳಿಂದ ನೀರೆತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಭದ್ರಾ ನದಿಪಾತ್ರದಲ್ಲಿ ಮಳೆಯಾಗಿ 6 ರಿಂದ 8 ಸಾವಿರ ಕ್ಯೂಸೆಕ್ ಹರಿಯುವಾಗ ಡ್ಯಾನಿಂದ ಕುಡಿಯುವ ನೀರು ಒದಗಿಸುವ ಅಗತ್ಯವಿಲ್ಲ ಆದ್ದರಿಂದ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಲಿಂಗರಾಜ್ ಎಚ್ ಆರ್ ಶಾಮನೂರು ಆಗ್ರಹಿಸಿದ್ದಾರೆ.



