ದಾವಣಗೆರೆ: ಈ ಬಾರಿ ತೀವ್ರ ಮಳೆಯ ಕೊರತೆ ಹಿನ್ನೆಲೆ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ನಾಲೆಗಳಿಂದ ಅಚ್ಚುಕಟ್ಟಿನ ಕೊನೆ ಭಾಗದ ರೈತರ ಬೆಳೆಗಳಿಗೆ ಭದ್ರಾ ನೀರು ತಲುಪುತ್ತಿಲ್ಲ. ಹೀಗಾಗಿ ನಾಲೆಗಳಲ್ಲಿ ಅಕ್ರಮವಾಗಿ ಹಾಕಿರುವ ಪಂಪ್‍ಸೆಟ್ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಭದ್ರಾ ನಾಲೆಗಳಲ್ಲಿ ನೀರು ಹರಿಸಲು ಆನ್ ಅಂಡ್ ಆಫ್ ವ್ಯವಸ್ಥೆ ಕೈಗೊಳ್ಳಲಾಗಿದ. ನೀರಾವರಿ ಇಲಾಖೆ ಮತ್ತು ಬೆಸ್ಕಾಂ ಅಧಿಕಾರಿಗಳು ಭದ್ರಾ ನಾಲೆಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಬೇಕು. ಜತೆಗೆ ಪಂಪ್‍ಸೆಟ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದರು.
ಅಚ್ಚುಕಟ್ಟು ವ್ಯಾಪ್ತಿಯಲ್ಲು ಭತ್ತವು ಕಾಳು ಕಟ್ಟುವ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಭತ್ತಕ್ಕೆ ನೀರಿನ ಹೆಚ್ಚಿನ ಅವಶ್ಯಕತೆ ಇದೆ. ಹೀಗಾಗಿ ನೀರಾವರಿ ನಿಗಮದ ಇಂಜಿನಿಯರ್ ಗಳು ಸಕಾಲದಲ್ಲಿ ರೈತರಿಗೆ ನೀರನ್ನು ಒದಗಿಸಬೇಕು. ದಾವಣಗೆರೆ ವಿಭಾಗದ ನಾಲೆಗಳಿಗೆ 7 ದಿನ ಹಾಗೂ ಮಲೆಬೆನ್ನೂರು ವಿಭಾಗದ ನಾಲೆಗಳಿಗೆ 6 ಮತ್ತು 3 ದಿನದಂತೆ ಆನ್ ಅಂಡ್ ಆಫ್ ಸಿಸ್ಟಮ್ ಅಳವಡಿಸಲಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶಗಳಲ್ಲಿನ 9ಬಿ ಹಾಗೂ 9ಸಿ ನಾಲೆಗಳಿಗೂ ಸಹ ನೀರು ತಲುಪಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಡಾ. ಅಶ್ವಥ್ ಎಂ.ಬಿ, ಹರಿಹರ ತಹಶೀಲ್ದಾರ್ ಪೃಥ್ವಿ ಸಾನಿಕಂ, ಕಾರ್ಯ ನಿರ್ವಾಹಕ ಇಂಜಿನಿಯರ್ ಮಂಜುನಾಥ್ ಆರ್.ಬಿ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.