ದಾವಣಗೆರೆ: ಬ್ಯಾಂಕ್‌ಗಳ ಖಾಸಗೀಕರಣ ನಿರ್ಧಾರ ಖಂಡಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ವೇದಿಕೆ ದೇಶವ್ಯಾಪಿ ಬಂದ್ ಕರೆ ನೀಡಿದೆ. ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಬ್ಯಾಂಕ್ ಮುಷ್ಕರಕ್ಕೆ ದಾವಣಗೆರೆಯಲ್ಲಿಯೂ ಬೆಂಬಲ ನೀಡಲಾಗಿದೆ. ಮಂಡಿಪೇಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮುಂಭಾಗ ಇಂದು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಸಂಚಾಲಕ ಕೆ. ಎನ್. ಗಿರಿರಾಜ್ ಮಾತನಾಡಿ, ಬ್ಯಾಂಕ್ ಖಾಸಗೀಕರಣವು ದೇಶಕ್ಕೆ ಮಾರಕ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದು ಉದ್ಯೋಗ ಭದ್ರತೆಗೆ ಧಕ್ಕೆ ತರುವುದು ಖಂಡನೀಯವಾಗಿದೆ. ಕೇಂದ್ರದ ಈ ನೀತಿ ಖಂಡಿಸಿ ದೇಶಾದ್ಯಂತ ಇಂದಿನಿಂದ ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.
ದೇಶದಾದ್ಯಂತ 90 ಸಾವಿರ ಬ್ಯಾಂಕ್ ಶಾಖೆಗಳು ಸಂಪೂರ್ಣ ಬಂದ್ ಆಗಿವೆ. 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಬ್ಯಾಂಕಿಂಗ್ ಸೌಲಭ್ಯವು ದೇಶದ ಮೂಲೆ ಮೂಲೆಗೂ ತಲುಪಬೇಕು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಹ ಬ್ಯಾಂಕಿನ ಕಟ್ಟೆ ಹತ್ತಬೇಕು. ಆದರೆ, ಪ್ರಸ್ತುತ ದೇಶದ 6,38,000 ಹಳ್ಳಿಗಳ ಪೈಕಿ ಕೇವಲ 35,000 ಹಳ್ಳಿಗಳಲ್ಲಿ ಮಾತ್ರ ಬ್ಯಾಂಕ್ ಶಾಖೆಗಳಿವೆ. ಈ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿ ಬಲಗೊಳ್ಳಬೇಕಾಗಿದೆ ಎಂದರು.
ಬ್ಯಾಂಕ್ ಸಂಘಟನೆಯ ನಾಯಕ ಎಸ್. ಟಿ. ಶಾಂತಗಂಗಾಧರ್ ಮಾತನಾಡಿದರು, ಮುಷ್ಕರದಲ್ಲಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಅಂಗ ಸಂಘಟನೆಗಳಾದ ಎ.ಐ.ಬಿ.ಇ.ಎ., ಎ.ಐ.ಬಿ.ಓ.ಸಿ., ಎನ್.ಸಿ.ಬಿ.ಇ., ಎ.ಐ.ಬಿ.ಓ.ಎ., ಬಿ.ಇ.ಎಫ್.ಐ., ಐ.ಎನ್.ಬಿ.ಇ.ಎಫ್., ಐ.ಎನ್.ಬಿ.ಓ.ಸಿ., ಎನ್.ಓ.ಬಿ.ಡಬ್ಲ್ಯು., ಎನ್.ಓ.ಬಿ.ಓ., ಗ್ರಾಮೀಣ ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ಸಂಘಗಳು ಹಾಗೂ ಪಿಗ್ಮಿ ಸಂಗ್ರಹಕಾರರ ಸಂಘಟನೆಗಳು ಭಾಗವಹಿಸಿದ್ದವು.



