Connect with us

Dvgsuddi Kannada | online news portal | Kannada news online

ದಾವಣಗೆರೆ: ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಚಾಲನೆ

gram panchayth amruth abhiyana.jpg

ದಾವಣಗೆರೆ

ದಾವಣಗೆರೆ: ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಚಾಲನೆ

ದಾವಣಗೆರೆ: ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಚಾಲನೆ ನೀಡಿದರು. ಗ್ರಾಮೀಣ ಸಮುದಾಯವನ್ನು ಕೋವಿಡ್ ಮುಕ್ತವನ್ನಾಗಿಸಲು  ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಅಭಿಯಾನ ಜಾರಿಗೆ ತರಲಾಗಿದೆ ಎಂದು ಸಚಿವರು ಹೇಳಿದರು.

ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಂದು  ಪಂಚಾಯತ್ ಆರೋಗ್ಯ ಅಮೃತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯದ 14 ಜಿಲ್ಲೆಗಳ 110 ತಾಲ್ಲೂಕುಗಳಲ್ಲಿ 2816 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಈ ಅಭಿಯಾನ ಜಾರಿಯಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಜೊತೆಯಾಗಿ ಸ್ವಯಂ ಸೇವಾ ಸಂಸ್ಥೆ ಕೆ.ಎಚ್.ಪಿ.ಟಿ ಯ ಸಹಭಾಗಿತ್ವದಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಹರಡುತ್ತಿದ್ದ ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ ಪಂಚಾಯತ್ ಕೋವಿಡ್ ಕಾರ್ಯಪಡೆಯನ್ನು ರೂಪಿಸಿತು. ಅದರಂತೆ ಸೋಂಕಿನ ನಿರ್ವಹಣೆಯಲ್ಲಿ ಕೋವಿಡ್ ಮುಕ್ತ ಪಂಚಾಯತ್ ಗುರಿ ಸಾಧಿಸುವತ್ತ ಪಂಚಾಯತಿಗಳು ಹೆಜ್ಜೆಯಿಟ್ಟಿವೆ. ಕೋವಿಡ್ ಸೋಂಕಿನ ನಿರ್ವಹಣೆಯ ನಂತರ ಮುಂಬರುವ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗ್ರಾಮ ಪಂಚಾಯತ್‌ಗಳು ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಮುದಾಯ ಶಕ್ತಿ ಬೆಂಬಲವನ್ನು ಮೇಳೈಸಬೇಕು ಎಂಬ ಉದ್ದೇಶದಿಂದ ಪಂಚಾಯತ್ ಕಾರ್ಯಪಡೆಯ ವ್ಯಾಪ್ತಿ ವಿಸ್ತರಿಸಲಾಗಿದೆ. ಅದು ಗ್ರಾಮ ಪಂಚಾಯತ್ ಆರೋಗ್ಯ ಪಡೆ ಎಂಬ ಹೊಸ ರೂಪ ಪಡೆದಿದೆ ಎಂದರು.

ವಿವಿಧ ಕಾರಣಗಳಿಗಾಗಿ ಆರೋಗ್ಯ ಸೇವೆಗಳಿಂದ ವಂಚಿತರಾದ ಕಟ್ಟಕಡೆಯ ಸಮುದಾಯಕ್ಕೂ ಕೈಗೆಟುಕುವ ಗುಣಮಟ್ಟದ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳು ಹಾಗೂ ಆಯುಷ್ಮಾನ್ ಭಾರತ್ ಕಾರ್ಯಕ್ರಮ ತಲುಪಬೇಕಿದೆ ಎಂದು ತಿಳಿಸಿದರು.

ಜಗತ್ತಿನ ಕ್ಷಯ ರೋಗದ ಕಾಲು ಭಾಗಕ್ಕೂ ಹೆಚ್ಚಿನ ಹೊರೆ ಅನುಭವಿಸುತ್ತಿರುವ ದೇಶ ನಮ್ಮದು. ಅಂತೆಯೇ 2025 ಹೊತ್ತಿಗೆ ದೇಶವನ್ನು ಕ್ಷಯ ಮುಕ್ತ ದೇಶವನ್ನಾಗಿ ಮಾಡುವ ಭಾರತ ಸರ್ಕಾರದ ಸಂಕಲ್ಪವನ್ನು ಸಾಕಾರಗೊಳಿಸಲು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದ ನಿರ್ವಹಣೆಗೆ ಇತರ ಇಲಾಖೆಗಳ ಸಹಕಾರ ಮತ್ತು ಸಂಘ ಸಂಸ್ಥೆಗಳೊಂದಿಗಿನ ಸಮನ್ವಯತೆ ಬಹು ಮುಖ್ಯ. ಹೀಗಾಗಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಜೊತೆಗೂಡಿ ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನವನ್ನು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೊಳಿಸಲಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಭಾಗಿತ್ವ ನೀಡಿದೆ. ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ ಕೋವಿಡ್ ಸೋಂಕು ತಡೆ ಮತ್ತು ನಿರ್ವಹಣೆ ಲಸಿಕಾ ಆಂದೋಲನ, ಕ್ಷಯರೋಗ ನಿರ್ಮೂಲನೆ ಅಸಾಕ್ರಾಮಿಕ ರೋಗಗಳ ಪತ್ತೆ ಮತ್ತು ನಿರ್ವಹಣೆ ಬಾಲ್ಯ ವಿವಾಹ ವಿರೋದಿ ಆಂದೋಲನಗಳಂತಹ ಪ್ರಮುಖ ಕಾರ್ಯಕ್ರಮಗಳನ್ನು ನಡೆಸಲಿದೆ.

ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನ ಹೆಸರೇ ಹೇಳುವಂತೆ ಮುಂಬರುವ ಕಾಲಮಾನದಲ್ಲಿ ಗ್ರಾಮ ಸಮಾಜಕ್ಕೆ ಪಂಚಾಯತ್‌ಗಳು ಆರೋಗ್ಯದ ಅಮೃತವನ್ನು ನೀಡುತ್ತವೆ ಎಂಬ ಆಶಯದೊಂದಿಗೆ ಹೊಸ ದಿಗಂತದತ್ತ ಹೆಜ್ಜೆ ಇಡುತ್ತಿದ್ದೇವೆ. ಪಂಚಾಯತ್ ಕಾರ್ಯಪಡೆಯ ಸದಸ್ಯರಿಗೆ ತರಬೇತಿ, ಆರೋಗ್ಯ ತಪಾಸಣೆಯ 8 ಮಹತ್ವದ ಉಪಕರಣಗಳನ್ನು ಒಳಗೊಂಡ ಪಂಚಾಯತ್ ಕಿಟ್, ಕೋವಿಡ್ ಸೋಂಕು ಖಾತ್ರಿಯಾದವರ ಪ್ರತ್ಯೇಕ ವಾಸದ ಆರೈಕೆಗಾಗಿ ಕೋವಿಡ್ ಕಿಟ್, ಸೋಂಕಿತರು, ಸೋಂಕಿನಿAದ ನೊಂದವರು, ಸಾವಿಗೀಡಾದವರ ಕುಟುಂಬದ ಆಪ್ತಸಮಾಲೋಚನೆಯೂ ಸೇರಿದಂತೆ ‘ಸಹಿತ’ ಸಹಾಯವಾಣಿಯಲ್ಲಿ ಸಾಂತ್ವನ ಸೇವೆ ದೊರೆಯಲಿದೆ ಕಾರ್ಯಪಡೆಯ ಲಸಿಕಾ ಆಂದೋಲನಕ್ಕೆ ಮಾಹಿತಿ, ಶಿಕ್ಷಣ ಸಂವಹನದ ಐಇಸಿ ಕಿಟ್ ಲಭ್ಯವಿದೆ. ಇದರಲ್ಲಿ ಕೋವಿಡ್ ಸೋಂಕು ಹರಡದಂತಿರಲು ಬೇಕಾದ ಸರಿಯಾದ ನಡೆವಳಿಕೆ, ಸೋಂಕು ರೋಗಗಳಿಂದ ಬಳಲುತ್ತಿರುವವರ ಮತ್ತು ಅವರ ಕುಟುಂಬದ ಬಗ್ಗೆ ಇರುವ ಕಳಂಕ ಕಡಿಮೆ ಮಾಡುವ ಬಗ್ಗೆ ಅರಿವು ಜಾಗೃತಿ ಮೂಡಿಸುವ ಸಂದೇಶಗಳಿವೆ. ಗ್ರಾಮ ಸಮಾಜದ ಪ್ರಾಥಮಿಕ ಹಂತದ ಆರೋಗ್ಯ ನಿಗಾವಣೆಗೆ ಪಂಚಾಯತ್ ಕಿಟ್ ಸಹಕಾರಿಯಾಗಲಿವೆ ಎಂದರು.

ವಿಶೇಷ ವಾರ್ಡ್ ಗಳ ಉದ್ಘಾಟನೆ : ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ 03ನೇ ಅಲೆ ನಿರ್ವಹಣೆ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ಮಕ್ಕಳ ಚಿಕಿತ್ಸಾ ವಿಶೇಷ ವಾರ್ಡ್  ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಅವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು. ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸಿಇಒ ಡಾ. ವಿಜಯ ಮಹಾಂತೇಶ್, ಡಿಹೆಚ್‌ಒ ಡಾ. ನಾಗರಾಜ್, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಜಯಪ್ರಕಾಶ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಜಯಪ್ರಕಾಶ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top