ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಮಾದಪುರ ಗ್ರಾಮದಲ್ಲಿ ಕಳ್ಳತನವಾಗಿದ್ದ ಅಡಿಕೆ ಕಳ್ಳರನ್ನು ಜಿಲ್ಲಾ ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಪರಾಧಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 5 ಲಕ್ಷ ಮೌಲ್ಯದ ಅಡಿಕೆ ವಶಕ್ಕೆ ಪಡೆಯಲಾಗಿದೆ.
ನ್ಯಾಮತಿ ತಾಲೂಕಿನ ಮಾದಪುರ ಗ್ರಾಮದ ಬಸವಗೌಡ ಎಂಬುವರ ಗೋಡಾನ್ ನಲ್ಲಿ ಸಂಗ್ರಹಿಸಿದ್ದ 65 ಚೀಲ ಅಡಿಕೆಯಲ್ಲಿ 15 ಚೀಲ ಕಳ್ಳತನವಾಗಿದ್ದವು. ಈ ಬಗ್ಗೆ ಬಸವಗೌಡ ಅವರು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಅನ್ವಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ , ಹೆಚ್ಚುವರಿ ವರಿಷ್ಠಾಧಿಕಾರಿ ರಾಜೀವ್ ಎಂ ಹಾಗೂ ಚನ್ನಗಿರಿ ಉಪಾಧೀಕ್ಷಕ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ನೃತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಟಿ.ವಿ. ದೇವರಾಜ್ ನೃತೃತ್ವದಲ್ಲಿ ತಂಡ ಸವಳಂಗ ಕಡೆಯಿಂದ ಬರುತ್ತಿದ್ದ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಯನೂರಿನಿಂದ ಸವಳಂಗ ಕಡೆಗೆ ಒಂದು ಓಮಿನಿ ವ್ಯಾನ್ ಬರುತ್ತಿದ್ದನ್ನು ಕಂಡ ಸಿಬ್ಬಂದಿ, ಪರಿಶೀಲನೆ ನಡೆಸಿದಾಗ 04 ಅಡಿಕೆ ಚೀಲ ಹಾಗೂ ನಾಲ್ಕು ಜನ ರನ್ನು ಅನುಮಾನದ ಮೇಲೆ ವಶಕ್ಕೆ ಪಡೆಯಲಾಗುತ್ತದೆ. ಆರೋಪಿಗಳಾದ ಅಬ್ದುಲ್ ಮಜೀದ್ (24), ಒಬ್ಬ ಬಾಲಪರಾಧಿ, ಮಹ್ಮದ್ ತೌಸೀಫ್ (24) ಹಾಗೂ ನಾಗರಾಜ್ (24) ಬಂಧಿಸಿ ವಿಚಾರಣೆ ನಡೆಸಿದಾಗ ನ್ಯಾಮತಿಯ ತಾಲ್ಲೂಕಿನ ಮಾದಪುರ ಹಾಗೂ ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದಲ್ಲಿ ಅಡಿಕೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ಧಾರೆ.
ಬಂಧಿತರಿಂದ ಕೆಎ-03ಪಿ-0498 ನಂಬರಿನ ಓಮಿನಿ, 50 ಕೆಜಿ ತೂಕದ 04 ಚೀಲ ಹಾಗೂ 62 ಕೆ.ಜಿ ತೂಕದ 15 ಅಡಿಕೆ ಚೀಲಗಳನ್ನು ವಶಪಡೆಯಲಾಗಿದೆ. ಇದರ ಅಂದಾಜು ಮೊತ್ತ 5 ಲಕ್ಷ ರೂಪಾಯಿ ಆಗಿದೆ. ಪ್ರಕರಣವನ್ನು ಬೇಧಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



