ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ಮಾರ್ಚ್ ಆರಂಭದಿಂದಲೂ ಸತತ ಏರಿಕೆ ಕಾಣುತ್ತಿತ್ತು. ಆದರೆ, ಇಂದು (ಮಾ. 25) ಒಂದೇ ದಿನ 500 ರೂ.ಗಳಷ್ಟು ದಿಢೀರ್ ಕುಸಿತ ಕಂಡಿದೆ. ಸದ್ಯ ಈ ತಿಂಗಳಲ್ಲಿ ಅಡಿಕೆ ಮಾರುಕಟ್ಟೆ ಕುಸಿತದಿಂದ ಚೇತರಿಕೆ ಕಂಡಿದ್ದು, ಸ್ವಲ್ಪ ದಿನ ಇಟ್ಟು ಮಾರಾಟ ಮಾಡುವವರಿಗೆ ಮುಂದೆ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ. ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಮಾ.25ರಂದು ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 49,000 ರೂ.ಗಳಿದ್ದು, ಕನಿಷ್ಠ ಬೆಲೆ 39,299ರೂ.ಗಳಾಗಿದೆ. ಹಿಂದಿನ ದಿನದ ಮಾರುಕಟ್ಟೆಯಲ್ಲಿ 49,500 ರೂಪಾಯಿ ಇತ್ತು.
ಇನ್ನೂ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು, ಬೋರ್ ವೆಲ್ ಗಳಿಂದ ನೀರು ಬರುತ್ತಿಲ್ಲ. ಮಳೆಗಾಲದಲ್ಲಿ ಐದಾರು ವಾಲ್ ಗಳಿಗೆ ಆಗುವಷ್ಟು ಬರುತ್ತಿದ್ದ ಬೋರ್ ವೆಲ್ ನೀರು, ಈಗ ಒಂದೆರಡು ವಾಲ್ ಗಳಿಗೆ ಆಗುವಷ್ಟು ಕುಸಿದಿವೆ. ಇನ್ನೂ ಕೆಲವು ಬೋರ್ ಗಳು ನಿಂತೇ ಹೋಗಿವೆ. ಹೀಗಾಗಿ ಹೇಗಾದ್ರೂ ಮಾಡಿ ಏಪ್ರಿಲ್, ಮೇ ತಿಂಗಳಲ್ಲಿ ಅಡಿಕೆ ತೋಟ ಬದುಕಿಸಿಕೊಂಡರೆ ಸಾಕು ಎನ್ನುತ್ತಿದ್ದಾರೆ ದಾವಣಗೆರೆ ಜಿಲ್ಲೆಯ ರೈತರು. ಹೊಸ ವರ್ಷ 2024ರ ಆರಂಭದಿಂದಲೂ ಏರಿಮುಖದಲ್ಲಿದ್ದ ಅಡಿಕೆ ದರ ಜ. 15ರ ನಂತರ ಕುಸಿತ ಕಂಡಿತ್ತು. ಒಂದು ತಿಂಗಳಲ್ಲಿ 2,300 ರೂ.ಗಳಷ್ಟು ಕುಸಿತ ಕಂಡಿತ್ತು. ಈಗ ಸ್ವಲ್ಪ ಪ್ರಮಾಣದಲ್ಲಿ ದರ ಚೇತರಿಕೆ ಹಾದಿಗೆ ಮರಳಿದೆ.
ಅಡಿಕೆ ತೋಟದಲ್ಲಿ ಅಡಿಕೆ ಕಾಯಿ ಕಟ್ಟುವ ಕಾರ್ಯ ಶುರುವಾಗಿದೆ. ಆದರೆ, ಜಿಲ್ಲೆಯಲ್ಲಿ ಬರದ ವಾತಾವರಣ ನಿರ್ಮಾಣವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ತಾಪಮಾನಕ್ಕೆ ಹರಳು ಉದುರುತ್ತಿವೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದು, ಬೋರ್ ವೆಲ್ ಗಳು ಬತ್ತಿ ಹೋಗಿವೆ. ಈ ಬೇಸಿಗೆಯಲ್ಲಿ ತೋಟ ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದ್ದು, ಬೋರ್ ಗಳಿಂದ ನೀರು ಬರುವ ಒಂದೆರಡು ತಾಸಿನಲ್ಲಿಯೇ ಸ್ವಲ್ಪ, ಸ್ವಲ್ಪ ಮರಕ್ಕೆ ಬಿಟ್ಟು ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವು ಕಡೆ ರೈತರು ಟ್ಯಾಂಕರ್ ಮೊರೆ ಹೋಗಿದ್ದಾರೆ.
2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ವರ್ಷದಲ್ಲಿಯೇ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್ ಮೊದಲ 15 ದಿನ 46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಆದರೆ, ಅಕ್ಟೋಬರ್ ಕೊನೆಯ ವಾರ ಮತ್ತೆ 47,800 ರೂ.ಗೆ ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ನಲ್ಲಿ 48 ಸಾವಿರ ಗಡಿ ದಾಟಿತ್ತು.ಇದೀಗ 2024 ಜನವರಿ 15ರಂದು ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಿಂದ ಸತತ ಕುಸಿತ ಕಂಡು ಈಗ 48ಸಾವಿರದಿಂದ 49 ಸಾವಿರ ಗಡಿದಾಟಿ 50 ಸಾವಿರ ಸಮೀಪ ಬಂದಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಮಾ.25ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 39,299 ರೂ, ಗರಿಷ್ಠ ಬೆಲೆ 49,000 ಹಾಗೂ ಸರಾಸರಿ ಬೆಲೆ 46,445 ರೂ.ಗೆ ಮಾರಾಟವಾಗಿದೆ. ಇನ್ನೂ ಬೆಟ್ಟೆ ಅಡಿಕೆ ಗರಿಷ್ಠ 33,036 ರೂ.ಗೆ ಮಾರಾಟವಾಗಿದೆ.