ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ (arecanut rate) ಸತತ ಮೂರು ದಿನವೂ ಏರಿಕೆ ಕಂಡಿದೆ. ಕಳೆದ ಮೂರು ದಿನದ ಮಾರುಕಟ್ಟೆಗೆ ಹೋಲಿಸಿದ್ರೆ ಇಂದು (ಮಾ.06) 500 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಸದ್ಯ ಅಡಿಕೆ ಮಾರುಕಟ್ಟೆ ಕುಸಿತದಿಂದ ಚೇತರಿಕೆ ಕಾಣುತ್ತಿದೆ. ಸ್ವಲ್ಪ ದಿನ ಇಟ್ಟು ಮಾರಾಟ ಮಾಡುವವರಿಗೆ ಮುಂದೆ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ. ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಇಂದು ( ಮಾ.6) ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 48,839 ರೂ.ಗಳಿದ್ದು, ಕನಿಷ್ಠ ಬೆಲೆ 46,819 ರೂ.ಗಳಾಗಿದೆ.
ಇನ್ನೂ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು, ಬೋರ್ ವೆಲ್ ಗಳಿಂದ ನೀರು ಬರುತ್ತಿಲ್ಲ. ಮಳೆಗಾಲದಲ್ಲಿ ಐದಾರು ವಾಲ್ ಗಳಿಗೆ ಆಗುವಷ್ಟು ಬರುತ್ತಿದ್ದ ಬೋರ್ ವೆಲ್ ಗಳು ಈಗ ಒಂದೆರಡು ವಾಲ್ ಗಳಿಗೆ ಬಂದಿವೆ. ಇನ್ನೂ ಕೆಲವು ನಿಂತೇ ಹೋಗಿವೆ. ಹೀಗಾಗಿ ಹೇಗಾದ್ರೂ ಮಾಡಿ ಏಪ್ರಿಲ್, ಮೇ ತಿಂಗಳಲ್ಲಿ ಅಡಿಕೆ ತೋಟ ಬದುಕಿಸಿಕೊಂಡರೆ ಸಾಕು ಎನ್ನುತ್ತಿದ್ದಾರೆ ರೈತರು. ಎರಡ್ಮೂರು ದಿನದಿಂದ ದಿಢೀರ್ 500 ರೂಪಾಯಿ ಚೇತರಿಕೆ ಕಂಡಿದ್ದು, ರೈತರಲ್ಲಿ ಸಂಸಸ ಮೂಡಿಸಿದೆ. ಹೊಸ ವರ್ಷ 2024ರ ಆರಂಭದಿಂದಲೂ ಏರಿಮುಖದಲ್ಲಿದ್ದ ಅಡಿಕೆ ದರ ಜ. 15ರ ನಂತರ ಕುಸಿತ ಕಂಡಿತ್ತು. ಒಂದು ತಿಂಗಳಲ್ಲಿ 2,300 ರೂ.ಗಳಷ್ಟು ಕುಸಿತ ಕಂಡಿತ್ತು. ಈಗ ಸ್ವಲ್ಪ ಪ್ರಮಾಣದಲ್ಲಿ ದರ ಚೇತರಿಕೆ ಹಾದಿಗೆ ಮರಳಿದೆ.
ಅಡಿಕೆ ತೋಟದಲ್ಲಿ ಅಡಿಕೆ ಹರಳು ಕಟ್ಟುವ ಕಾರ್ಯ ಶುರುವಾಗಿದೆ. ಆದರೆ, ಜಿಲ್ಲೆಯಲ್ಲಿ ಬರದ ವಾತಾವರಣ ನಿರ್ಮಾಣವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದು, ಬೋರ್ ವೆಲ್ ಗಳು ಬತ್ತಿ ಹೋಗಿವೆ. ಈ ಬೇಸಿಗೆಯಲ್ಲಿ ತೋಟ ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದ್ದು, ಬೋರ್ ಗಳಿಂದ ನೀರು ಬರುವ ಒಂದೆರಡು ತಾಸಿನಲ್ಲಿಯೇ ಸ್ವಲ್ಪ, ಸ್ವಲ್ಪ ಮರಕ್ಕೆ ಬಿಟ್ಟು ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವು ಕಡೆ ಬೋರ್ ನಿಂತಿದ್ದರಿಂದ ಟ್ಯಾಂಕರ್ ಮೊರೆ ಹೋಗಿದ್ದಾರೆ.
2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ವರ್ಷದಲ್ಲಿಯೇ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್ ಮೊದಲ 15 ದಿನ 46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಆದರೆ, ಅಕ್ಟೋಬರ್ ಕೊನೆಯ ವಾರ ಮತ್ತೆ 47,800 ರೂ.ಗೆ ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ನಲ್ಲಿ 48 ಸಾವಿರ ಗಡಿ ದಾಟಿತ್ತು.ಇದೀಗ 2024 ಜನವರಿ 15ರಂದು ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಿಂದ ಸತತ ಕುಸಿತ ಕಂಡು ಈಗ 48ಸಾವಿರದಿಂದ 49 ಸಾವಿರ ಒಳಗೆ ಇದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಮಾ.6ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 46,819 ರೂ, ಗರಿಷ್ಠ ಬೆಲೆ 48,839 ಹಾಗೂ ಸರಾಸರಿ ಬೆಲೆ 47,912 ರೂ.ಗೆ ಮಾರಾಟವಾಗಿದೆ. ಇನ್ನೂ ಬೆಟ್ಟೆ ಅಡಿಕೆ ಗರಿಷ್ಠ 33,820 ರೂ.ಗೆ ಮಾರಾಟವಾಗಿದೆ.