ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಏರಿಕೆ ಕಾಣುತ್ತಿದೆ. ಡಿ.15 ರಂದು ಒಂದೇ ದಿನ 400 ರೂ. ಬೆಲೆ ಚೇತರಿಕೆ ಕಂಡಿದೆ. ರಾಶಿ ಅಡಿಕೆ ಬೆಲೆ ಗರಿಷ್ಠ ಬೆಲೆ 48,199 ರೂಪಾಯಿಗಳಾಗಿದ್ದು, ಕನಿಷ್ಠ ಬೆಲೆ 46,599 ರೂ. ಆಗಿದೆ. ಡಿಸೆಂಬರ್ ತಿಂಗಳಲ್ಲಿ ವರ್ಷದ ಕೊನೆಯ ಕೊಯ್ಲು ಆಗಿದ್ದು, ಈ ತಿಂಗಳಲ್ಲಿ ರೇಟ್ ಏರುಮುಖವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ…!
ಈ ವರ್ಷದ ಅಡಿಕೆ ಬೆಲೆಯಲ್ಲಿ ಸಾಕಷ್ಟು ಏರಿಳಿತ ಕಂಡಿದ್ದರೂ, ವರ್ಷದ ಕೊನೆ ತಿಂಗಳಲ್ಲಿ ಮತ್ತೆ ಏರಿಕೆಯಾಗಿದ್ದು, ರೈತರರಲ್ಲಿ ಸಂತಸ ಮೂಡಿದೆ. 2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್ ಮೊದಲ 15 ದಿನ 46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಆದರೆ, ಅಕ್ಟೋಬರ್ ಕೊನೆಯ ವಾರ ಮತ್ತೆ 47,800 ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ಮೊದಲ ವಾರದಲ್ಲಿಯೂ ಸಹ 100, 200 ರೂಪಾಯಿ ಏರಿಳಿತ ಕಂಡರೂ 47 ಸಾವಿರ ಗಡಿದಾಟಿ ಬೆಲೆ ಸ್ಥಿರವಾಗಿತ್ತು. ಇದೀಗ ಕಳೆದ ಒಂದು ವಾರದಿಂದ ಸತತ ಏರಿಕೆ ಕಂಡು 49 ಸಾವಿರ ಗಡಿಯತ್ತ ಬಂದಿದೆ
ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ಮಳೆಗಾಲದಲ್ಲಿಯೇ ಬೇಸುಗೆ ವಾತಾವರಣ ನಿರ್ಮಾಣವಾಗಿತ್ತು. ಇನ್ನೂ ಜನವರಿ 15ರ ನಂತರ ( ಸಂಕ್ರಾಂತಿ) ಸೂರ್ಯ ಪತ ಬದಲಿಸಿದ್ದು ಬೇಸಿಗೆ ಅಧಿಕೃತವಾಗಿ ಶುರುವಾಗಲಿದೆ. ಈ ಸಲ ಮಳೆ ಕೊರತೆಯಿಂದ ಬೇಸಿಗೆಯಲ್ಲಿ ಬಿಸಿಲಿನ ಪ್ರಮಾಣ ಯಾವ ಮಟ್ಟಕ್ಕೆ ಇರಲಿದೆ ಎಂದು ನಿರೀಕ್ಷೆಯೂ ಕಷ್ಟವಾಗಿದೆ. ಈಗಾಗಲೇ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು, ಬೇಸಿಗೆಯಲ್ಲಿ ಅಡಿಕೆ ತೋಟ ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ. ಅದರಲ್ಲೂ ಏಪ್ರಿಲ್, ಮೇ ಎರಡು ತಿಂಗಳು ಅಡಿಕೆ ಬದುಕಿಸಿಕೊಂಡ ಸಾಕು ಎನ್ನುವಂತಾಗಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಡಿ.15ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 46,599, ಗರಿಷ್ಠ ಬೆಲೆ 48,199 ಹಾಗೂ ಸರಾಸರಿ ಬೆಲೆ 47,506 ರೂ.ಗೆ ಮಾರಾಟವಾಗಿದೆ. ಇನ್ನೂ ಬೆಟ್ಟೆ ಅಡಿಕೆ ಗರಿಷ್ಠ 37,737 ರೂ.ಗೆ ಮಾರಾಟವಾಗಿದೆ.



