ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ಇಂದು (ಜೂ.21) ದಿಢೀರ್ ಒಂದು ಸಾವಿರ ಕುಸಿತ ಕಂಡಿದೆ. ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 52,895 ರೂ.ಗಳಿದ್ದು, ಕನಿಷ್ಠ ಬೆಲೆ 44,099 ರೂ.ಗಳಾಗಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದರೆ 1000 ರೂ. ಕುಸಿದಿದೆ. ಜೂನ್ ಮೊದಲ ವಾರ 54 ಸಾವಿರ ಗಡಿ ದಾಟಿತ್ತು.
ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಹೀಗಾಗಿ ಇನ್ನೂ ಸ್ವಲ್ಪ ದಿನ ಇಟ್ಟು ಮಾರಾಟ ಮಾಡುವವರಿಗೆ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದರೂ ಕಳೆದ 10, 12 ದಿನದಿಂದ ಮಳೆ ಕೊರತೆ ಕಾಣುತ್ತಿದೆ. ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಮುನ್ಸೂಚನೆ ಇದೆ.
ಬಿಸಿ ಗಾಳಿಯ ಅಲೆ ತಗ್ಗಿದೆ. ಕಳೆದ ಬಾರಿಯ ತೀವ್ರ ಬರದಿಂದ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿತ್ತು. ಇದೀಗ ಸ್ವಲ್ಪ ಚೇತರಿಕೆ ಕಾಣುತ್ತಿವೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದರಿಂದ ಅಡಿಕೆ ಬೆಳೆ ರೈತರಲ್ಲಿ ಸಂತಸ ಮೂಡಿಸಿದೆ.
2024 ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ ಏಕಾಏಕಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಈಗ ಏಪ್ರಿಲ್ ನಲ್ಲಿ ಗರಿಷ್ಠ 54 ಸಾವಿರ ಗಡಿ ತಲುಪಿತ್ತು. ಮೇ ತಿಂಗಳಲ್ಲಿ ಗರಿಷ್ಠ ಈಗ 55 ಸಾವಿರ ತಲುಪಿ ಕುಸಿತ ಕಂಡಿತ್ತು. ಜೂನ್ ತಿಂಗಳ ಎರಡನೇ ವಾರದಿಂದ ಮತ್ತೆ ಕುಸಿತ ಕಾಣುತ್ತಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಜೂ.21ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 44,099 ರೂ., ಗರಿಷ್ಠ ಬೆಲೆ 52,895 ಹಾಗೂ ಸರಾಸರಿ ಬೆಲೆ 51,415ರೂ.ಗೆ ಮಾರಾಟವಾಗಿದೆ.



