Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ದರದಲ್ಲಿ ಭಾರಿ ಏರಿಕೆ; 52 ಸಾವಿರದತ್ತ ರಾಶಿ ಅಡಿಕೆ ದರ; ಏಕಾಏಕಿ ಬೆಲೆ ಏರಿಕೆಗೆ ಕಾರಣ ಏನು..?

ದಾವಣಗೆರೆ

ದಾವಣಗೆರೆ: ಅಡಿಕೆ ದರದಲ್ಲಿ ಭಾರಿ ಏರಿಕೆ; 52 ಸಾವಿರದತ್ತ ರಾಶಿ ಅಡಿಕೆ ದರ; ಏಕಾಏಕಿ ಬೆಲೆ ಏರಿಕೆಗೆ ಕಾರಣ ಏನು..?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಕ್ಕೆ (arecanut rate) ಮತ್ತೆ ಬಂಪರ್ ಬೆಲೆ ಬಂದಿದ್ದು,‌ ಕಳೆದ 15 ದಿನದಿಂದ ಸತತ ಏರಿಕೆ ಕಾಣುತ್ತಿದೆ. ಇಂದು ಒಂದೇ ದಿನ 600 ರೂ. ಏರಿಕೆಯಾಗಿದೆ. ಸಾಕಷ್ಟು ಏರಿಳಿತ ಬಳಿಕ ಈಗ 52 ಸಾವಿರ ಗಡಿಯತ್ತ ಮುನ್ನುಗ್ಗುತ್ತಿದೆ. ಇಂದು (ಏ.17) ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 51,121 ರೂ.ಗಳಿದ್ದು, ಕನಿಷ್ಠ ಬೆಲೆ 50,021 ರೂ.ಗಳಾಗಿದೆ. ಹಿಂದಿನ ದಿನ ಮಾರುಕಟ್ಟೆಯಲ್ಲಿ ಗರಿಷ್ಠ 50,539 ರೂಪಾಯಿ ಇತ್ತು.

ಏಪ್ರಿಲ್ ತಿಂಗಳ ಆರಂಭದಿಂದಲೂ ದರ ಸತತ ಏರಿಕೆ ಕಾಣುತ್ತಿದ್ದು, ರೈತರಲ್ಲಿ ಸಂತಸ ಒಂದೆಡೆಯಾದ್ರೆ, ಅಂತರ್ಜಲ ಕುಸಿತದಿಂದ ಆತಂಕ ಮತ್ತೊಂದೆಡೆಯಾಗಿದೆ. ಅಷ್ಟಕ್ಕೂ ದರ ಏರಿಕೆಗೆ ಮುಖ್ಯ ಕಾರಣ ಏನು ಎಂಬುವುದನ್ನು ನೋಡುವುದಾದ್ರೆ, ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಅಡಿಕೆ ಆಮದು ಸಂಪೂರ್ಣ ಸ್ಥಗಿತಗೊಂಡಿರುವುದು ಒಂದು ಕಾರಣವಾಗಿದೆ ಮತ್ತು ಚಳಿಗಾಲದಲ್ಲಿ ಪಾನ್ ಮಸಾಲ ಹಾಳಾಗುತ್ತದೆ ಎಂಬ ಕಾರಣಕ್ಕೆ ಪಾನ್ ಮಸಾಲ ಕಂಪನಿಗಳು ಉತ್ಪಾದನೆ ಮಾಡುವುದಿಲ್ಲ. ಬೇಸಿಗೆಯಲ್ಲಿ ಉತ್ಪಾದನೆ ಹೆಚ್ಚಿಸುತ್ತವೆ. ಈಗ ಅಡಿಕೆ ಖರೀದಿಗೆ ಮುಂದಾಗಿರುವುದರಿಂದ ಕ್ವಿಂಟಲ್ ಅಡಿಕೆ ದರ 51 ಸಾವಿರ ದಾಟಲು ಮುಖ್ಯ ಕಾರಣ ಎನ್ನಲಾಗುತ್ತಿದೆ. ಮುಂದಿನ ದಿನದಲ್ಲಿ ದರ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಹೀಗಾಗಿ ಸ್ವಲ್ಪ‌ ದಿನ ಇಟ್ಟು ಮಾರಾಟ ಮಾಡುವವರಿಗೆ‌ ಮುಂದೆ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ. ಏಪ್ರಿಲ್ ತಿಂಗಳಲ್ಲಿ ಅಸಲಿ ಬೇಸಿಗೆ ಈಗ ಶುರುವಾಗಿದೆ. ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದೆ. ವಾತಾವರಣದಲ್ಲಿ ಬಿಸಿಗಾಳಿ ಹೆಚ್ಚಿದ್ದು, ಅಡಿಕೆ ಬೆಳೆ ಒಣಗುತ್ತಿವೆ. ಹೇಗಾದ್ರೂ ಮಾಡಿ ಏಪ್ರಿಲ್, ಮೇ ತಿಂಗಳಲ್ಲಿ ಅಡಿಕೆ ತೋಟ ಬದುಕಿಸಿಕೊಂಡರೆ ಸಾಕು ಎಂದು ರೈತರು ಹರಸಾಹಸ ಪಡುತ್ತಿದ್ದಾರೆ. ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ತಾಪಮಾನಕ್ಕೆ ಹರಳು ಉದುರುತ್ತಿವೆ. ಬೋರ್ ವೆಲ್ ಗಳು ಬತ್ತಿದ್ದು ರೈತರು ಟ್ಯಾಂಕರ್ ಮೊರೆ ಹೋಗಿದ್ದಾರೆ.

2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ವರ್ಷದಲ್ಲಿಯೇ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್‌ ಮೊದಲ 15 ದಿನ ‌46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಆದರೆ, ಅಕ್ಟೋಬರ್ ‌ಕೊನೆಯ ವಾರ ಮತ್ತೆ 47,800 ರೂ.ಗೆ ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ನಲ್ಲಿ 48 ಸಾವಿರ ಗಡಿ ದಾಟಿತ್ತು. ಇದೀಗ 2024 ಜನವರಿ 15ರಂದು ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಈಗ ಏಪ್ರಿಲ್ ನಲ್ಲಿ ಗರಿಷ್ಠ 51 ಸಾವಿರಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಏಪ್ರಿಲ್ 17ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 50,021ರೂ, ಗರಿಷ್ಠ ಬೆಲೆ 51,121 ಹಾಗೂ ಸರಾಸರಿ ಬೆಲೆ 50,693ರೂ.ಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಗರಿಷ್ಠ 33,936 ರೂ. ಇದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top