ದಾವಣಗೆರೆ: ಕಳೆದ ಎರಡು ತಿಂಗಳಿನಿಂದ ಹೆಚ್ಚುತ್ತಿರುವ ತಾಪಮಾನದಿಂದ ಅಡಿಕೆ ಬೆಳೆಯಲ್ಲಿ ರೋಗ ಮತ್ತು ಕೀಟಗಳ ಬಾಧೆ ಹೆಚ್ಚಾಗಿದೆ. ಬಿಳಿ ನುಸಿ, ಕೆಂಪು ನುಸಿ, ಬ್ಯಾಕ್ಟೀರಿಯಾ ಎಲೆ ಚುಕ್ಕೆ ರೋಗ ಕಾಣಿಸಿಕೊಳ್ಳಿವೆ. ಅಡಿಕೆ ತೋಟಗಳಲ್ಲಿ ಆತಂರಿಕ ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಈ ಬಾಧೆಗಳು ಹೆಚ್ಚಾಗುತ್ತಿವೆ. ಇದರ ನಿಯಂತ್ರಣಕ್ಕೆ ರೈತರು ತೋಟಗಳಲ್ಲಿ ಉಳುಮೆ ಮಾಡದೇ, ಹಸಿರೆಲೆ ಗೊಬ್ಬರದ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆಯಬೇಕು ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡಎಂ.ಜಿ. ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಿ.ದುರ್ಗ ತರಳಬಾಳು ಅಮೃತ ರೈತಉತ್ಪಾದಕ ಕಂಪನಿ ಹಾಗೂ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನಕೇಂದ್ರ ಸಂಯುಕ್ತಾಶ್ರಯದಲ್ಲಿ ಗುಂಜಿಗನೂರು ಗ್ರಾಮದಲ್ಲಿ ಹಮ್ಮಿಕೊಂಡ ಪ್ರಧಾನ ರೈತರ ತರಬೇತಿ ಹಾಗೂ ಅಡಿಕೆ ಬೆಳೆಯ ವೈಜ್ಞಾನಿಕ ಬೇಸಾಯದ ತರಬೇತಿಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡಿದರು. ಕೀಟಗಳ ನಿಯಂತ್ರಣಕ್ಕೆ ಹೆಕ್ಸಿತೈಯಾಜಾಕ್ಸ್ 1 ಮಿಲೀ ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು ಅಲ್ಲದೆ, ಹೊಸ ತೋಟಗಳಲ್ಲಿ ಅಂತರ ಬೆಳೆಯಾಗಿ ಬಾಳೆ, ಪಪ್ಪಾಯ ಹಾಗೂ ನುಗ್ಗೆ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕ ಲಾಭಗಳನ್ನು ಪಡೆಯಬಹುದೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದಕೇಂದ್ರದ ತಜ್ಞ ರಘುರಾಜ ಜೆ., ರೈತ ಉತ್ಪಾದಕ ಕಂಪನಿಗಳು ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರಗಳನ್ನು ನೀಡುವುದಲ್ಲದೇ, ರೈತರ ಬೆಳೆಗಳಿಗೆ ಉತ್ತಮ ಬೆಲೆ ಕಂಡುಕೊಳ್ಳಲು ಸಹಾಯಕಾರಿಯಾಗಬಲ್ಲದು ಎಂದು ತಿಳಿಸಿದರು. ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್‌ಟಿ.ಜಿ. ಮಾತನಾಡಿ ತರಳಬಾಳು ರೈತ ಉತ್ಪಾದಕ ಕಂಪನಿಗಳಿಂದ ಈಗಾಗಲೇ ಮೆಕ್ಕೆಜೋಳದ ಹೊರ ವ್ಯಾಪಾರವನ್ನು ಪ್ರಾರಂಭಿಸಿದ್ದು ಮಧ್ಯವರ್ತಿಗಳ ಗೋಜಿಲ್ಲದೇ ಕ್ವಿಂಟಾಲ್‌ಗೆ 50 ರಿಂದ 100 ರೂಗಳು ಹೆಚ್ಚು ಸಿಗುತ್ತಿದೆ. ಇದರಿಂದ ರೈತರಿಗೆ ಅರ್ಥಿಕ ಸ್ವಾವಲಂಬನೆಯನ್ನು ಹೊಂದಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ವರುಣ್ ಜೆ.ಡಿ., ಮಧು, ನಿರ್ದೇಶಕ ಬಸವರಾಜಪ್ಪ, ಬಸವಂತಪ್ಪ ಹಾಗೂ 50 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.



