ದಾವಣಗೆರೆ: ತರಕಾರಿ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಲು ಗುಣಮಟ್ಟದ ಧೃಡೀಕೃತ ಬೀಜಗಳ ಬಳಕೆ ಅಗತ್ಯ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಜಗಳೂರು ತಾಲ್ಲೂಕು ನಿಬಗೂರು ಗ್ರಾಮದಲ್ಲಿ ಈರುಳ್ಳಿ ಬೆಳೆಯ ಸಮಗ್ರ ಬೇಸಾಯ ಕ್ರಮಗಳ ಕುರಿತು ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈರುಳ್ಳಿಯಲ್ಲಿ ಸ್ಥಳೀಯ ಲೋಕಲ್ ಬೀಜಗಳನ್ನು ಬಳಸಿದರೆ ಅವುಗಳಲ್ಲಿ ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳುವ ಶಕ್ತಿಯಿರುವುದಿಲ್ಲ. ಜೊತೆಗೆ ರೋಗ / ಕೀಟಗಳ ಭಾದೆಯೂ ಹೆಚ್ಚಾಗಿರುವುದರಿಂದ ಇಳುವರಿ ಕುಂಠಿತವಾಗುತ್ತದೆ ಎಂದು ತಿಳಿಸಿದರು.
ಕೇಂದ್ರದ ವತಿಯಿಂದ ಆಯ್ದ ರೈತರಿಗೆ ಭೀಮಾ ಡಾರ್ಕ್ ರೆಡ್ ಎಂಬ ತಳಿ ಈರುಳ್ಳಿ ಪರಿಚಯಿಸುತ್ತಿದ್ದು, ಮುಂಗಾರಿನಲ್ಲಿ ಬೆಳೆಯುವ ಈ ತಳಿ ಸುಮಾರು 95-100 ದಿನಗಳಲ್ಲಿ ಪ್ರತೀ ಎಕರೆಗೆ 8 ಟನ್ ಇಳುವರಿಯ ಸಾಮರ್ಥ್ಯವಿದೆ ಹಾಗೂ ಕೇಂದ್ರದ ಗಡ್ಡೆಗಳು ಉತ್ತಮ ಶೇಖರಣ ಸಾಮರ್ಥ್ಯವನ್ನು ಹೊಂದಿರುವುದರಿಂದ ಉತ್ತಮ ಬೆಲೆಯನ್ನು ನಿರೀಕ್ಷಿಸಬಹುದೆಂದರು.
ಸಸ್ಯ ಸಂರಕ್ಷಣಾ ವಿಜ್ಞಾನಿಯಾದ ಡಾ. ಅವಿನಾಶ್ ಟಿ.ಜಿ. ರವರು ಮಾತನಾಡಿ ಈರುಳ್ಳಿ ಬೀಜವನ್ನು ಬಿತ್ತನೆಗೂ ಮುನ್ನ 4 ಗ್ರಾಂ ಟ್ರೆöÊಕೋಡರ್ಮಾವನ್ನು ಪ್ರತೀ ಕೆಜಿಗೆ ಬೆರೆಸಿ ಬೀಜೋಪಚಾರವನ್ನು ಮಾಡುವುದರಿಂದ ಶಿಲೀಂದ್ರದಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದೆಂದರು. ಕಾರ್ಯಕ್ರಮದಲ್ಲಿ ರೈತರಾದ ವೀರೇಶ್, ನಾಗರಾಜ, ಗುರುಸಿದ್ದನಗೌಡ, ಜಗದೀಶ್ ಇತರರು ಹಾಜರಿದ್ದರು.



