ದಾವಣಗೆರೆ: ತೆಂಗಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ಕೋಕೋ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೆ ಉಪ ಆದಾಯವನ್ನುಗಳಿಸಲು ಅನುಕೂಲವಾಗುತ್ತದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ ತಿಳಿಸಿದರು.
ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ದಾವಣಗೆರೆ ಹಾಗೂ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತಾಶಯದಲ್ಲಿ ದಾವಣಗೆರೆ ತಾಲ್ಲೂಕು ಅಣಬೇರು ಗ್ರಾಮದಲ್ಲಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆಯಡಿ ಕೋಕೋ ಅಂತರ ಬೆಳೆ ಪ್ರದೇಶ ವಿಸ್ತರಣೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯಲ್ಲಿ ಈ ವರ್ಷ ಮಾಯಕೊಂಡ ಹೋಬಳಿಯಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆ ವಿಸ್ತರಣೆ ಯೋಜನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತೀ ಹೆಕ್ಟೇರ್ ರೂ. 16,690 ಸಹಾಯಧನ ಲಭ್ಯವಿದೆ ಹಾಗೂ ಒಬ್ಬ ರೈತರಿಗೆ ಗರಿಷ್ಠ4.0 ಹೆ. ವರೆಗೆ ಸಹಾಯಧನ ನೀಡಲು ಅವಕಾಶವಿದೆ ಎಂದು ತಿಳಿಸಿದರು.
ಇಂದು ತೆಂಗಿನ ತೋಟಗಳಲ್ಲೂ ಅಡಿಕೆ ಬೆಳೆಯ ವಿಸ್ತೀರ್ಣ ಹೆಚ್ಚಾಗುತ್ತಿದ್ದು, ರೈತರು ಮುಂಜಾಗೃತವಾಗಿ ನೀರಿನ ಬಳಕೆ ಬಗ್ಗೆ ಜಾಗರೂಕರಾಗಬೇಕು. ಕೋಕೋ ಬೆಳೆಗೆ ಕಡಿಮೆ ನೀರಿನ ಅವಶ್ಯಕತೆಯಿದ್ದು ಮಣ್ಣಿನ ಭೌತಿಕ, ರಸಾಯನಿಕ ಗುಣಗಳ ವೃದ್ದಿಗೆ ಕೋಕೋ ಬೆಳೆಯ ಎಲೆಗಳು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ರೇಷ್ಮಾ ಪರ್ವಿನ್ ಮಾತನಾಡಿದರು. ಅಧಿಕಾರಿಗಳಾದ ವಿಶ್ವೇಶ್ವರಯ್ಯ, ಏಕಾಂತ, ಅರುಣರಾಜ್, ವಸಂತ ಕುಮಾರ್, ರೈತರಾದ ಪಾಲಾಕ್ಷಪ್ಪ, ಮಲ್ಲಿಕಾರ್ಜುನಪ್ಪ, ಬಸವರಾಜಪ್ಪ ಇತರರು ಹಾಜರಿದ್ದರು.