ದಾವಣಗೆರೆ: ಕಡಿಮೆ ಖರ್ಚಿನ ಡ್ರಮ್‍ಸೀಡರ್, ಕೂರಿಗೆ ಬಿತ್ತನೆ ಮತ್ತು ಚೆಲ್ಲುಭತ್ತ ಕೃಷಿಯ ತಾಂತ್ರಿಕತೆ ಬಳಿಸಿಕೊಳ್ಳುವಂತೆ ರೈತರಿಗೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ. ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಕುರ್ಕಿ ಗ್ರಾಮದಲ್ಲಿ ಕೃಷಿ ಕಾಯಕಯೋಗಿ ರೈತ ಉತ್ಪಾದಕ ಸಂಸ್ಥೆ, ಕೃಷಿ ಇಲಾಖೆ ಸಹಯೋಗದಲ್ಲಿ ಭತ್ತ ಬೆಳೆಯುವ ರೈತರಿಗೆ ತರಬೇತಿ ಕಾರ್ಯಾಗಾರ ಹಾಗೂ ಅರ್ಹ ಫಲಾನುಭವಿಗಳಿಗೆ ತುಂತುರು ನೀರಾವರಿ ಘಟಕಗಳ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಾಮೂಲಿ ನಾಟಿ ಪದ್ಧತಿಗೆ ಹೋಲಿಸಿದಲ್ಲಿ ಎಕರೆಗೆ ಸುಮಾರು ಮೂರು ಸಾವಿರದಿಂದ ನಾಲ್ಕು ಸಾವಿರ ರೂ ಗಳನ್ನು ಖರ್ಚಿನಲ್ಲಿ ಉಳಿತಾಯ ಮಾಡಬಹುದು. ಈ ತಾಂತ್ರಿಕತೆ ಅಳವಡಿಸಿದಲ್ಲಿ ಕೂಲಿಯಾಳುಗಳ ಸಮಸ್ಯೆ ಸರಿದೂಗಿಸುವುದಲ್ಲದೆ ಖರ್ಚನ್ನು ಕಡಿಮೆ ಮಾಡಬಹುದು, ಇಳುವರಿಯೂ ಸಹ ಚೆನ್ನಾಗಿ ಬರುತ್ತದೆ, ಅಲ್ಲದೆ ಭೂಮಿ ಸವಕಳಿ ಕಡಿಮೆಯಾಗುವುದಲ್ಲದೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂದರು.
ಸರ್ಕಾರವು ಮಣ್ಣು ಮತ್ತು ನೀರಿನ ಮಹತ್ವದ ಬಗ್ಗೆ ಸಾಕಷ್ಟು ಒತ್ತು ನೀಡುತ್ತಿದ್ದು ಅದಕ್ಕೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ರೈತರು ನೀರಿದೆ ಎಂದು ಹೆಚ್ಚು ಬಳಸದೆ ಅವಶ್ಯಕತೆಗನುಗುಣವಾಗಿ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಹೇಳಿದರು.
ನಮ್ಮ ಸರ್ಕಾರವು ಮಣ್ಣು ಮತ್ತು ನೀರಿನ ಮಹತ್ವದ ಬಗ್ಗೆ ಸಾಕಷ್ಟು ಒತ್ತು ನೀಡುತ್ತಿದ್ದು ಅದಕ್ಕೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ರೈತರು ನೀರಿದೆ ಎಂದು ಹೆಚ್ಚು ಬಳಸದೆ ಅವಶ್ಯಕತೆಗನುಗುಣವಾಗಿ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು, ಇದರಿಂದ ಭೂಮಿಯ ಗುಣಮಟ್ಟ ಕಾಪಾಡಿಕೊಳ್ಳುವುದರ ಜೊತೆಗೆ ಉತ್ತಮ ಬೆಳೆ ಪಡೆಯಬಹುದು. ಸರ್ಕಾರವು ಎಲ್ಲಾ ವರ್ಗದ ರೈತರಿಗೆ ಶೇ,90 ರ ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕಗಳನ್ನು ವಿತರಿಸುತ್ತಿದ್ದು ರೈತರು ಇದರ ಅನುಕೂಲ ಪಡೆದುಕೊಳ್ಳಲು ಕೃಷಿ ಇಲಾಖೆಗೆ ಭೇಟಿ ನೀಡಬೇಕೆಂದು ತಿಳಿಸಿದರು. ರೈತರು ರೈತ ಉತ್ಪಾದಕ ಸಂಸ್ಥೆಗಳ ಕಡೆ ಗಮನ ಹರಿಸಬೇಕು. ಕೇಂದ್ರ ಸರ್ಕಾರ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರೋತ್ಸಾಹಿಸಲು 750 ರೈತ ಉತ್ಪಾದಕ ಸಂಸ್ಥಗಳಿಗೆ ರೂ.10 ಲಕ್ಷದಂತೆ ಸಹಾಯ ಧನ ನೀಡುತ್ತಿದೆ. ಅದರಂತೆ ಕೃಷಿ ಕಾಯಕಯೋಗಿ ರೈತ ಉತ್ಪಾದಕ ಕಂಪನಿ ಲಿ. ಕುರ್ಕಿ ಗೆ 10 ಲಕ್ಷ ಸಹಾಯಧನ ನೀಡಿದೆ ಎಂದು ತಿಳಿಸಿ, ಸಂಸ್ಥೆಯ ಸದಸ್ಯರಿಗೆ ಶೇರ್‍ಬಾಂಡನ್ನು ಇದೇ ಸಂದರ್ಭದಲ್ಲಿ ವಿತರಿಸಿದರು. ಈಗಾಗಲೇ ರೈತ ಉತ್ಪಾದಕ ಕಂಪನಿಯಲ್ಲಿ 750 ಜನ ಶೇರುದಾರ ಸದಸ್ಯರಿದ್ದು ಇನ್ನೂ 250 ಜನ ರೈತರು ಸೇರಬಹುದಾಗಿದೆ. ರೈತರು ಕೊಡಲೇ ಶೇರು ಮೊತ್ತ ಪಾವತಿಸಿ ಸದಸ್ಯರಾಗುವಂತೆ ಪ್ರೊ. ಲಿಂಗಣ್ಣ ತಿಳಿಸಿದರು.
ಕುರ್ಕಿ ಗ್ರಾಮದ ಕೃಷಿ ಕಾಯಕಯೋಗಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಸಿ ಎನ್ ಲೋಹಿತ್ ಮಾತನಾಡಿ, ನಮ್ಮ ಸಂಸ್ಥೆಯು ಕಳೆದ ಮಾರ್ಚ ತಿಂಗಳಲ್ಲಿ ಶುರುವಾಗಿದ್ದು ಸದ್ಯ 750 ಸದಸ್ಯರಿದ್ದಾರೆ ಇನ್ನು 250 ರೈತರು ಸದಸ್ಯರಾಗಿ ಅನುಕೂಲ ಪಡೆಯಲು ಅವಕಾಶವಿದೆ. ಸಂಸ್ಥೆ ವತಿಯಿಂದ ವಿವಿಧ ಕೃಷಿ ಪರಿಕರಗಳನ್ನು ಮಾರಾಟ ಮಾಡುತ್ತಿದ್ದು ಈವರೆಗೆ 80 ಲಕ್ಷ ರೂ. ವಹಿವಾಟಾಗಿದೆ. ರೈತರಿಗೆ ಅವಶ್ಯವಿರುವ ತರಬೇತಿಗಳನ್ನೂ ಸಹ ಏರ್ಪಡಿಸಿದ್ದೇವೆ, ಮುಂದಿನ ದಿನಗಳಲ್ಲಿ ನೇರವಾಗಿ ರೈತರಿಂದಲೇ ಖರೀದಿಸಿ ನಮ್ಮದೇ ಕೃಷಿ ಪರಿಕರಗಳ ಮಾರಾಟ ಮಾಡುವ ಉದ್ದೇಶವಿದೆ. ಇದಕ್ಕೆ ಎಲ್ಲಾ ರೈತರು, ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಲಹೆ ಸಹಕಾರ ನೀಡಬೇಕು ಹೀಗೆ ಮಾಡಿದಲ್ಲಿ ರಾಜ್ಯದಲ್ಲಿಯೇ ಮಾದರಿ ರೈತ ಉತ್ಪಾದಕ ಕಂಪನಿಯನ್ನಾಗಿ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ, ರೇವಣಸಿದ್ದನಗೌಡ ಹೆಚ್. ಕೆ. ಕುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಜಿ. ನಂದ್ಯಪ್ಪ , ಕೃಷಿ ಮತ್ತು ತೋಟಗಾರಿಕ ಸಂಶೋಧನಾ ಕೇಂದ್ರದ ವಿಜ್ಞಾನಿ ಎ ಎಂ ಮಾರುತೇಶ್ ಮತ್ತು ಪ್ರಗತಿಪರ ರೈತರು ಭಾಗವಹಿಸಿದ್ದರು.