ದಾವಣಗೆರೆ: ತೆಂಗಿನಲ್ಲಿ ಕಪ್ಪು ತಲೆ ಹುಳುವಿನ ಹಾನಿಯಿಂದ ತೆಂಗಿನ ಬೆಳೆಯ ಉತ್ಪಾದನೆ ಕುಂಠಿತವಾಗುವ ಎಲ್ಲಾ ಲಕ್ಷಣಗಳಿವೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಶ್ರೀ ಬಸವನಗೌಡ ಎಂ ಜಿ ಅಭಿಪ್ರಾಯಪಟ್ಟರು.
ದಾವಣಗೆರೆ ತಾಲ್ಲೂಕು ಮುದಹದಡಿ, ಮಿಟ್ಲಕಟ್ಟೆ, ಬಟ್ಲಕಟ್ಟೆ, ನಾಗನೂರು ಸುತ್ತ ಮುತ್ತ ತೆಂಗಿನ ತೋಟಗಳಿಗೆ ತೋಟಗಾರಿಕೆ ಇಲಾಖೆ ಹಾಗೂ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವೈಜ್ಞಾನಿಕ ಕ್ಷೇತ್ರ ಭೇಟಿ ನೀಡಿ ಮಾಹಿತಿ ನೀಡಲಾಯಿತು. ಈ ಗ್ರಾಮಗಳ ತೆಂಗಿನ ತೋಟಗಳಲ್ಲಿ ನಿರೋಧಕ ಶಕ್ತಿ ಕುಂದಿರುವುದರ ಪರಿಣಾಮ ತೋಟಗಳಲ್ಲಿ ಕಪ್ಪು ತಲೆ ಹುಳದ ಭಾದೆ ತೀವ್ರವಾಗಿದೆ. ಈ ರೀತಿ ಎಲೆಯ ಕೆಳಭಾಗದಲ್ಲಿ ಹಸಿರು ಭಾಗವನ್ನು ಕೆರೆದು ತಿನ್ನುವುದು ನಂತರ ಗರಿಗಳು ಸುಟ್ಟ ರೀತಿ ಭಾವಿಸುವುದು ಈ ಹಾನಿ ಲಕ್ಷಣಗಳಾಗಿವೆ, ಇದರ ಭಾದೆ ಬೇಸಿಗೆ ತಿಂಗಳುಗಳಲ್ಲಿ ಹೆಚ್ಚುವ ಸಂಭವವಿದ್ದು, ರೈತರು ಸೂಕ್ತ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆಯಿದೆ ಎಂದು ತಿಳಿಸಿದರು.
ಇದರ ನಿಯಂತ್ರಣಕ್ಕೆ ತೀವ್ರತೆ ಮೊದಲ ಹಂತದಲ್ಲಿದ್ದಾಗ ಹೊರವಲಯದ ಮರಗಳಲ್ಲಿ ಹಾನಿಯಾದ ಗರಿಗಳನ್ನು ಕತ್ತರಿಸಿ ನಾಶ ಮಾಡಬೇಕು, ತೋಟದಲ್ಲಿ ಬಿದ್ದ ಗರಿಗಳು, ಕಳೆಗಳನ್ನು ತೆಗದುಹಾಕಿ ಸ್ವಚ್ಛಗೊಳಿಸಬೇಕು. ಕಪ್ಪು ತಲೆ ಹುಳು ಮರಿ ಹುಳುವಿಗೆ ಹಂತದಲ್ಲಿದ್ದಾಗ ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಪರೋಪಜೀವಿ ಗೋನಿಯೋಜಸ್ ನೆಫೆಂಡಿಡಿಸ್ ಅನ್ನು ಪ್ರತಿ ಪ್ರತಿ ಮರಕ್ಕೆ 15 ರಿಂದ 20 ರಂತೆ ಪ್ರತಿ 15 ದಿವಸಗಳಿಗೊಮ್ಮೆ ಕನಿಷ್ಠ ನಾಲ್ಕು ಬಾರಿ ಬಿಡಬೇಕು, ಸಿಂಪರಣೆ ಮಾಡುವುದಾದರೆ ಬೈಪೆನ್ ಥ್ರಿನ್ 1.5 ಮೀ ಲಿ ಅಥವಾ ಅಜಾದಿರೆಕ್ಟನ್ 5% ಅನ್ನು 2 ಮೀ ಲಿ ಪ್ರತಿ ಲೀಟರ್ ನೀರಿನಲ್ಲಿ ಬೆರಗಿ ಎಲೆಗಳ ಕೆಳಭಾಗ ಸಿಂಪರಣೆ ಮಾಡಬೇಕು ಎಂದು ವಿವರಿಸಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ರೇಷ್ಮಾ ಪರ್ವೀನ್ ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಪವನ್ ಕುಮಾರ್ ರೈತರೊಂದಿಗೆ ಸಂವಾದ ನಡೆಸಿ ಎಲ್ಲಾ ರೈತರು ಸಹಕಾರದಿಂದ ಮೇಲಿನ ಹತೋಟಿ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.



