ದಾವಣಗೆರೆ: ವಿದ್ಯುತ್ ಕಂಬವಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಗೆ ಪಲ್ಟಿಯಾಗಿದ್ದು, ಕಂಬದ ಕೆಳಗೆ ಸಿಲುಕಿದ್ದ ಯುವಕ ಬದುಕಿದ್ದೆ ಆಶ್ಚರ್ಯಕರವಾದ ಘಟನೆ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.
ಹೊನ್ನಾಳಿ ತಾಲೂಕಿನ ಹರಳಹಳ್ಳಿ ಬಳಿ ಈ ಘಟನೆ ನಡೆದಿದೆ. ಯುವಕನ ಮೈಮೇಲೆ ಮೂರು ವಿದ್ಯುತ್ ಕಂಬಗಳು ಬಿದ್ದರೂ ಬದುಕುಳಿದಿದ್ದೇ ಪವಾಡಸದೃಶವಾಗಿದೆ. ಯುವಕ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಟ್ರ್ಯಾಕ್ಟರ್ ನಲ್ಲಿ ಐದು ವಿದ್ಯುತ್ ಕಂಬಳಗಳನ್ನು ತೆಗೆದುಕೊಂಡು ಹೋಗಲಾಗುತಿತ್ತು. ಈ ವೇಳೆ ಟ್ರ್ಯಾಕ್ಟರ್ ಗದ್ದೆಯಲ್ಲಿ ಪಲ್ಟಿಯಾಗಿದೆ.
ಟ್ರ್ಯಾಕ್ಟರ್ ನ ಹಿಂಬದಿಯಲ್ಲಿ ಯುವಕ ಕುಳಿತಿದ್ದ. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗದ್ದೆಗೆ ಪಲ್ಟಿಯಾಗಿದೆ. ಇದರಿಂದ ಯುವಕನು ಕೆಳಗಡೆ ಬಿದ್ದಿದ್ದಾನೆ. ಟ್ರ್ಯಾಕ್ಟರ್ ನಲ್ಲಿದ್ದ ಕಂಬಗಳು ಆತನ ಮೇಲೆ ಬಿದ್ದಿವೆ. ಅದೃಷ್ಟವಶಾತ್ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ಸ್ಥಳೀಯರು ವಿದ್ಯುತ್ ಕಂಬಗಳನ್ನು ತೆಗೆದು ಯುವಕನನ್ನು ಮೇಲಕ್ಕೆತ್ತಿದರು. ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಯುವಕ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಚಾಲಕ ಸಹ ಅಪಾಯದಿಂದ ಪಾರಾಗಿದ್ದಾರೆ.