ದಾವಣಗೆರೆ: ಟಿಪ್ಪರ್ ಲಾರಿಯೊಂದು ಜಿಲ್ಲಾ ಕೇಂದ್ರವನ್ನು ಸ್ವಾಗತಿಸುವ ಫಲಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಫಿಲ್ಲರ್ ಸಮೇತ ಫಲಕಗಳು ಕಿತ್ತುಬಂದ ಘಟನೆ ನಿನ್ನೆ (ಮೇ 10) ರಾತ್ರಿ ನಡೆದಿದೆ.
ನಗರದ ಹೊರವಲಯದ ಬಾತಿ ಸಮೀಪ ಈ ಘಟನೆ ನಡೆದಿದೆ ಬಾತಿ ಕಡೆಯಿಂದ ನಗರಕ್ಕೆ ಬರುತ್ತಿದ್ದ ಲಾರಿ ಚಾಲಕನ ಅಜಾಗರೂಕತೆಯಿಂದ ಹೈಡ್ರಾಲಿಕ್ ಟಿಪ್ಪರ್ ಮೇಲೆದ್ದಿತ್ತು. ಚಾಲಕ ಇದನ್ನು ಗಮನಿಸದೆ ಲಾರಿ ಚಾಲನೆ ಮಾಡಿದ್ದಾನೆ. ಲಾರಿ ವೇಗವಾಗಿ ಆಗಮಿಸಿದಾಗ ಸ್ವಾಗತ ಫಲಕಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಜಿಲ್ಲಾ ಕೇಂದ್ರಕ್ಕೆ ಸ್ವಾಗತಿಸುವ “ಕೈಮುಗಿದು ಒಳಗೆ ಬಾ, ಇದು ಜ್ಞಾನ ಕಾಶಿ ” ಫಲಕ ಸಮೇತ ಎರಡೂ ಬದಿಯ ಪಿಲ್ಲರ್‌ಗಳು ಕಿತ್ತು ಬಂದಿವೆ. ಈ ಘಟನೆ ಸಂಭವಿಸಿದಾಗ ಅದೃಷ್ಟವಶಾತ್ ಯಾವುದೇ ವಾಹನಗಳು, ಪಾದಚಾರಿಗಳ ಸಂಚಾರ ಇರಲಿಲ್ಲ. ಪರಿಣಾಮ ಭಾರಿ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.



