ದಾವಣಗೆರೆ: ಅಡಿಕೆ ಬೆಳೆ ಉಳಿಸಿಕೊಳ್ಳಲು ಜಿಲ್ಲೆಯಲ್ಲಿ ಬೋರ್ ವೆಲ್ ಕೊರೆಸುವವರ ಪ್ರಮಾಣ ಹೆಚ್ಚಾಗಿದೆ. ಹೀಗೆ ಬೋರ್ ಕೊರೆಯುವುದನ್ನು ನೋಡುತ್ತಾ ನಿಂತಿದ್ದ ವ್ಯಕ್ತಿ ಮೇಲೆ ಪೈಪ್ ಸಿಡಿದು ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದ ಜಮೀನೊಂದರಲ್ಲಿ ಈ ಘಟನೆ ನಡೆದಿದೆ. ತಿಮ್ಮಪ್ಪ (53) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಬೋರ್ ಲಾರಿಯ ಆಪರೇಟರ್ ಪೈಪ್ ಬದಲಿಸುವಾಗ ಸರಿಯಾಗಿ ಪೈಪ್ ಜೋಡಣೆ ಮಾಡದೆ ನಿರ್ಲಕ್ಷ್ಯ ತೋರಿದ್ದರಿಂದ ಪೈಪ್ ಬೋರ್ ಗಾಡಿಯಿಂದ ಸಿಡಿದು ಅಲ್ಲೇ ನಿಂತಿದ್ದ ತಿಮ್ಮಪ್ಪನ ಮೇಲೆ ಬಿದ್ದಿದೆ ಎಂದು ಮೃತರ ಪತ್ನಿ ಮಂಜಮ್ಮ ದೂರು ನೀಡಿದ್ದಾರೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದ್ದು, ತೀವ್ರ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದೆ. ಅಡಿಕೆ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದು, ಬೀರ್ ವೆಲ್ ಮೊರೆ ಹೋಗಿದ್ದಾರೆ. ಸಾವಿರ ಅಡಿ ಆಳ ಕೊರೆದರೂ ಒಂದು ಹನಿ ನೀರು ಬೀಳುತ್ತಿಲ್ಲ.



