ದಾವಣಗೆರೆ: ನಡು ರಸ್ತೆಯಲ್ಲಿ ನೆಟ್ಟ ಕಂಬಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದ್ದು, ಕಂಬ ಎದುರಿಗೆ ಬಂದ ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಈ ಭೀಕರ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿಟ್ಟುವಳ್ಳಿ 60 ಅಡಿ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ನಿಟ್ಟುವಳ್ಳಿ ಭಗೀರಥ ಸರ್ಕಲ್ ಬಳಿಯ ನಿವಾಸಿ ಗಣೇಶ್ (40) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ರಸ್ತೆ ನಡುವೆ ಬ್ಯಾನರ್ ಕಟ್ಟಲು ಕಂಬ ನೆಡಲಾಗಿತ್ತು. ಇದನ್ನು ಗಮನಿಸಿದೆ ವೇಗವಾಗಿ ಬಂದ ಟಿಟಿ ವಾಹನ, ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಂಬ ಮುರಿದು ಎದುರಿಗೆ ಬರುತ್ತಿದ್ದ ಬೈಕ್ ಸವಾರನ ತಲೆಯ ಮೇಲೆ ಬಿದ್ದಿದೆ. ಬೈಕ್ ಸವಾರ ಬೈಕ್ ನಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಸ್ಥಳೀಯರು ಕೂಡಲೇ ಬೈಕ್ ಸವಾರನನ್ನು ಆಸ್ಪತ್ರೆಗೆ ಸೇರಿಸಲಾದರೂ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ನಡು ರಸ್ತೆಯಲ್ಲಿ ಕಂಬ ನೆಟ್ಟವರ ವಿರುದ್ದ ಜನರು ಆಕ್ರೋಶ ಹೊರ ಹಾಕಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



