ದಾವಣಗೆರೆ: ಭೀಕರ ಅಪಘಾತದವೊಂದರಲ್ಲಿ ಬುಲೆರೋ ವಾಹನ ಪಲ್ಟಿಯಾಗಿದೆ. ವಾಹನದಲ್ಲಿದ್ದ 8 ಮಂದಿಯಲ್ಲಿ ಮೂವರು ಮೃತಪಟ್ಟಿದ್ದು, ಐವರು ಗಾಯಗೊಂಡ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಶಿವಮೊಗ್ಗ-ಶಿಕಾರಿಪುರ ರಸ್ತೆಯ ಚಿನ್ನಿಕಟ್ಟೆ ಗ್ರಾಮದ ಬಳಿ ನಡೆದಿದೆ.
ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಭದ್ರಾವತಿ ತಾಲೂಕು ಚಂದನಕೆರೆ ಗ್ರಾಮದ ಮಂಜುನಾಥ (45), ನಾಗರಾಜ(39) ಶಿವಮೊಗ್ಗ ಆಸ್ಪತ್ರೆಯಲ್ಲಿ ಮೃತಪಟ್ಟರು ಹಾಗೂ ಗೌತಮ (16) ಮಂಗಳೂರಿನ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಚಂದನಕೆರೆ ಗ್ರಾಮದ ವೆಂಕಟೇಶ, ಮಂಜುನಾಥ, ನಾಗರಾಜ, ಗೌತಮ್, ವಿಜಯಪ್ಪ, ಉಲ್ಲಾಸ, ಗಣೇಶ, ಸುರೇಶಪ್ಪ ಹಾಗೂ ಶಿಕಾರಿಪುರ ತಾಲೂಕು ಅರಿಷಿಣಗೆರೆ ಗ್ರಾಮದಲ್ಲಿ ಅಡಿಕೆ ಕೊಯ್ಲು ಮಾಡಿ ಬುಲೆರೋ ವಾಹನದಲ್ಲಿ ಅಡಿಕೆ ತುಂಬಿಕೊಂಡು ವಾಪಸ್ ಬರುವಾಗ ವಾಹನ ಪಲ್ಟಿಯಾಗಿದೆ.
ವಾಹನದ ಕ್ಯಾಬಿನ್‌ನಲ್ಲಿದ್ದ ವೆಂಕಟೇಶ, ಉಲ್ಲಾಸ ಮತ್ತು ಚಾಲಕ ಪ್ರದೀಪನಿಗೆ ತರಚು ಗಾಯಗಳಾದರೆ, ವಾಹನದ ಹಿಂಬದಿಯಲ್ಲಿದ್ದ ಮಂಜುನಾಥ, ನಾಗರಾಜ ಮತ್ತು ಗೌತಮ ಮೃತಪಟ್ಟಿದ್ದಾರೆ. ವಿಜಯಪ್ಪ, ಸುರೇಶ ಮತ್ತು ಗಣೇಶ್ ಗೆ ತೀವ್ರ ಗಾಯಗಳಾಗಿವೆ. ಅಪಘಾತಕ್ಕೆ ಕಾರಣನಾದ ಚಾಲಕ ಪ್ರದೀಪ್ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಗಾಯಾಳು ಪಿ.ವೆಂಕಟೇಶ ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ. ನ್ಯಾಮತಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಎನ್.ಎಸ್.ರವಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.



