ದಾವಣಗೆರೆ: ಅತಿ ವೇಗವಾಗಿ ಬಂದ ಕಾರೊಂದು ಟ್ರ್ಯಾಕ್ಟರ್ ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆ ಹೊರ ವಲಯದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 48ರ ಶಿರಮಗೊಂಡನಹಳ್ಳಿ ಬ್ರಿಡ್ಜ್ ಬಳಿ ಈ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಐವರಿಗೆ ಗಂಭೀರ ಗಾಯವಾಗಿವೆ. ಮೃತರನ್ನು ಹಾವೇರಿ ಮೂಲದವರು ಎಂಬುದಾಗಿ ತಿಳಿದು ಬಂದಿದೆ. ಬೆಂಗಳೂರು ಕಡೆಯಿಂದ ಹಾವೇರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ
ಕಾರಿನಲ್ಲಿ ಒಟ್ಟು 7 ಜನರು ಪ್ರಯಾಣಿಸುತ್ತಿದ್ದರು. ಐವರ ಸ್ಥಿತಿ ಗಂಭೀರವಾಗಿದ್ದು,ಎಸ್.ಎಸ್.ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



