ದಾವಣಗೆರೆ: ಅಂಗನವಾಡಿಯಿಂದ ಮನೆಗೆ ತೆರಳುತ್ತಿದ್ದ ಪುಟ್ಟ ಕಂದಮ್ಮನ ಮೇಲೆ ಟಿಪ್ಪರ್ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಗ್ರಾಮಸ್ಥರು ರಸ್ತೆ ತಡೆದು ಆಕ್ರೋಶ ವ್ಯಕ್ತಡಿಸಿದ್ದಾರೆ.
ಹಳೇ ಕುಂದುವಾಡ ಗ್ರಾಮದ ಗಣೇಶ್ ದಂಪತಿ ಪುತ್ರಿ ಚರಸ್ವಿ(2) ಮೃತ ಕಂದಮ್ಮ. ಅಂಗನವಾಡಿ ಮುಗಿಸಿಕೊಂಡು ಮಧ್ಯಾಹ್ನ ತನ್ನ ಅಜ್ಜಿಯೊಂದಿಗೆ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಎಂ ಸ್ಯಾಂಡ್ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಹರಿದಿದೆ. ಚಾಲಕನ ನಿರ್ಲಕ್ಷ್ಯಕ್ಕೆ ವಾಹನದ ಟಿಪ್ಪರ್ ಚಕ್ರಕ್ಕೆ ಸಿಲುಕಿ, ತೀವ್ರ ಗಾಯಗೊಂಡಿದ್ದ ಕಂದಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಘಟನೆ ಖಂಡಿಸಿ ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪರ್ ಚಾಲಕ ಮತ್ತು ಮಾಲೀಕ ಲಾರಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಗ್ರಾಮಸ್ಥರು ಲಾರಿ ಚಾಲಕ, ಮಾಲೀಕನ ಬಂಧನಕ್ಕೆ ಆಗ್ರಹಿಸಿದ್ದಾರೆ. ದಕ್ಷಿಣ ಸಂಚಾರಿ ಠಾಣೆಯಲ್ಲಿ ಘಟನೆ ನಡೆದಿದ್ದು, ವಿದ್ಯಾನಗರ ಪೊಲೀಸರು ಸ್ಥಳಕ್ಕೆ ನೀಡಿ ವಾತವರಣ ತಿಳಿಗೊಳಿಸಿದರು. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.