ಧಾರವಾಡ: ಸಂಕ್ರಾಂತಿ ಹಬ್ಬ ಹಿನ್ನೆಲೆ ದಾವಣಗೆರೆಯಿಂದ ಗೋವಾಕ್ಕೆ ಪ್ರವಾಸ ತೆರಳುತ್ತಿದ್ದ ಟೆಂಫೋ ಟ್ರಾವೆಲರ್ ಟಿಪ್ಪರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 11 ಮಂದಿ ಮೃತಪಟ್ಟು, 5 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಹೊರವಲಯದ ಇಟಿಗಟ್ಟಿ ಬೈಪಾಸ್ ಬಳಿ ಬೆಳಗಿನ ಜಾವ ನಡೆದಿದೆ.
ಭೀಕರ ಅಪಘಾತದಲ್ಲಿ ವೀಣಾ, ಮಂಜುಳಾ, ರಾಜೇಶ್ವರಿ ಸೇರಿದಂತೆ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ದಾವಣಗೆರೆಯ
ಲೇಡಿಸ್ ಕ್ಲಬ್‍ನ ಒಟ್ಟು 17 ಮಂದಿ ಮಹಿಳೆಯರು ಸಂಕ್ರಮಣ ಹಿನ್ನೆಲೆ ಟೆಂಫೋ ಟ್ರಾವೆಲರ್‍ನಲ್ಲಿ ಗೋವಾಕ್ಕೆ ತೆರಳುತ್ತಿದ್ದರು. ಧಾರವಾಡದ ಇಟಗಟ್ಟಿ ಬೈಪಾಸ್ ಬಳಿ ಬೆಳಗಿನ ಜಾವ 3.30ರ ಸುಮಾರಿನಲ್ಲಿ ಎದುರಿನಿಂದ ಬಂದ ಟಿಪ್ಪರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಟೆಂಫೋದಲ್ಲಿದ್ದ 10 ಮಂದಿ ಮಹಿಳೆಯರು ಮೃತಪಟ್ಟಿದ್ದು, ಟಿಪ್ಪರ್ ಚಾಲಕ ಕೂಡ ಅಸುನೀಗಿದ್ದಾನೆ. ಘಟನೆಯಲ್ಲಿ 5 ಮಂದಿಯ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದಾಗಿ ಟೆಂಫೋ ಟ್ರಾವೆಲರ್ ಹಾಗೂ ಟಿಪ್ಪರ್‍ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಒಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸಪಟ್ಟರು.
ಧಾರವಾಡ ಗ್ರಾಮೀಣ ಠಾಣೆ ಸಬ್‍ಇನ್ಸ್‍ಪೆಕ್ಟರ್ ಮಹೇಂದ್ರಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲು ಟ್ರಾಫಿಕ್ ಜಾಮ್ ಉಂಟಾಗಿದೆ.



