ದಾವಣಗೆರೆ: ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ತರಗತಿ ಪ್ರಾರಂಭಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟಿಸಲಾಯಿತು.
ನಗರದ ಗುಂಡಿ ಮಹದೇವಪ್ಪ ವೃತ್ತದಲ್ಲಿ ಪ್ರತಿಭಟಿಸಿ ಉನ್ನತ ಶಿಕ್ಷಣ ಸಚಿವರಿಗೆ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಕೊರೊನಾ ಎರಡನೇ ಅಲೆಗೆ ತತ್ತರಿಸಿದ್ದ ಕರ್ನಾಟಕ, ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಿದೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಮರು ಪ್ರಾರಂಭವಾಗಿ ವಿದ್ಯಾರ್ಥಿಗಳೆಲ್ಲ ಉತ್ಸಾಹದಿಂದ ಕಾಲೇಜುಗಳಿಗೆ ಬರುತ್ತಿರುವುದು ಸಂತೋಷದ ಸಂಗತಿ. ಆದರೆ ಭೌತಿಕ ತರಗತಿಗಳು ಆರಂಭಗೊಂಡರೂ, ಇನ್ನೂ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಪಾಠಗಳು ನಡೆಯದಿರುವುದು ಶೋಚನಿಯವಾಗಿದೆ.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ಸರ್ಕಾರ ಒಂದು ತಿಂಗಳ ತಡವಾಗಿ ನೇಮಿಸಿಕೊಂಡಿದೆ. ಅದು ಅವಶ್ಯಕತೆಗಿಂತ ಕಡಿಮೆ ಅಂದರೆ ಶೇಕಡ 80 ರಷ್ಟು ಉಪನ್ಯಾಸಕರನ್ನು ನೇಮಿಸಿಕೊಂಡಿದೆ. ಅಕ್ಟೋಬರ್ 28ರಿಂದ ಅತಿಥಿ ಉಪನ್ಯಾಸಕರು ಪಾಠಗಳನ್ನು ಮಾಡುತ್ತಿದ್ದರು. ಆದರೆ ಕಳೆದ ಶಕ್ರವಾರದಿಂದ, ದಿನಾಂಕ:- 10/12/2021 ರಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿದ್ದಾರೆ. ಅಂದಿನಿಂದ ಇಂದಿನವರೆಗೆ ತರಗತಿಗಳು ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಯಾಗಿದೆ. ಪ್ರತಿದಿನ ವಿದ್ಯಾರ್ಥಿಗಳು ಪಾಠ ಕೇಳಲೂ ಕಾಲೇಜಿಗೆ ಬಂದರೆ ಪಾಠಗಳು ನಡೆಯುತ್ತಿಲ್ಲ.
ವಿದ್ಯಾರ್ಥಿಗಳಿಗೆ ಸಿ-1 ಪರೀಕ್ಷೆ ಈ ತಿಂಗಳ ಕೊನೆಯಲ್ಲಿ ಬರುವುದರಿಂದ ಆದಷ್ಟು ಬೇಗ ಈ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಹಿಡಿಯಬೇಕು ಹಾಗೂ ಇನ್ನುಳಿದ ಶೇಕಡ 20ರಷ್ಟು ಅತಿಥಿ ಉಪನ್ಯಾಸಕರನ್ನು ಆದಷ್ಟು ಬೇಗ ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ತರಗತಿಗಳು ನಡೆಯಲು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿ ಪರಿಷತ್ ಎಚ್ಚರಿಸುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಹ ಸಂಚಾಲಕರಾದ ಶರತ್, ನಗರ ಕಾರ್ಯಕಾರಣಿ ಸದಸ್ಯರಾದ ಚರಣ್ ,ನರೇಂದ್ರ, ಕಾರ್ಯಕರ್ತರಾದ ದೊಡ್ಡೇಶ್, ಶಶಾಂಕ, ಮಂಜುನಾಥ್, ದೀಲಿಪ್, ಪ್ರಜ್ವಲ್, ಪಲ್ಲವಿ, ಅಮೃತ, ಇತರರಿದ್ದರು.



