ದಾವಣಗೆರೆ: ತಾಂತ್ರಿಕ ಕೌಶಲ್ಯ ಬಳಸಿ ಎಟಿಎಂ ನಿಂದ 3,47,900 ರೂ. ಹಣ ಬಿಡಿಸಿಕೊಂಡು ವಂಚನೆ ಮಾಡಿದ ಉತ್ತರ ಪ್ರದೇಶದ ನಾಲ್ವರು ಅಂತರಾಜ್ಯ ದುಷ್ಕರ್ಮಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಪ್ರಮೋದ ಕುಮಾರ, ಅರ್ಜುನ್ ಸಿಂಗ್,ಸಂದೀಪ್ ಸಿಂಗ್ ಚೌಹಾಣ್,ಲವ್ ಸಿಂಗ್ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ನಾಲ್ಕು ಎಟಿಎಂ ಕಾರ್ಡ್ ಗಳು ಹಾಗೂ 5 ಸಾವಿರ ನಗದು, 5 ಲಕ್ಷ ಮೌಲ್ಯದ ಸ್ವಿಫ್ಟ್ ಡಿಸೈರ್ ಕಾರನ್ನು ಕೆಟಿಜೆ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ಶ್ರೀ ಮುರುಘರಾಜೇಂದ್ರ ಕೋ-ಆಪ್ ಬ್ಯಾಂಕ್‌ನ ವ್ಯವಸ್ಥಾಪಕ ಎಂ.ಎಸ್.ಅರುಣ್ ಕೆಟಿಜೆ ನಗರ ಠಾಣೆಯಲ್ಲಿ ನೀಡಿದ್ದ ದೂರಿನಲ್ಲಿ ಕುವೆಂಪು ರಸ್ತೆಯ ತಮ್ಮ ಬ್ಯಾಂಕ್‌ನ ಎಟಿಎಂಪಿಗೆ 6 ಲಕ್ಷ ರು. ಹಣ ಡೆಪಾಸಿಟ್ ಮಾಡಲಾಗಿತ್ತು. ಜು.19ರ ಮಧ್ಯಾಹ್ನ 3ಕ್ಕೆ ಎಟಿಎಂ ನಿರ್ವಾಹಕರಾದ ಶೈಲಜಾ ಎಂಬುವರ ಜೊತೆ ಎಟಿಎಂನಲ್ಲಿ ಹಣವನ್ನು ಭೌತಿಕವಾಗಿ ಪರಿಶೀಲಿಸಿದಾಗ ₹1.85 ಲಕ್ಷ ಮಾತ್ರ ಬಾಕಿ ಇದ್ದು, ಬ್ಯಾಂಕ್‌ನ ಜನರಲ್ ಲೆಡ್ಜರ್‌ನಲ್ಲಿ ₹5.85 ಲಕ್ಷ ಬಾಕಿ ಇರುತ್ತದೆ.
ಅನುಮಾನಗೊಂಡು ಎಟಿಎಂ ಸಿಸಿ ಟಿವಿ ಪರಿಸೀಲಿಸಿದಾಗ ಜು.18ರ ಬೆಳಿಗ್ಗೆ 11ರ ವೇಳೆ ಹಾಗೂ ಜು.19ರ ಬೆಳಿಗ್ಗೆ 8:30ರ ಮಧ್ಯೆ ಯಾರೋ ತಾಂತ್ರಿಕ ಕೌಶಲ್ಯ ಬಳಸಿ, ಎಟಿಎಂಸಿನಿಂದ ಹಣ ಬಿಡಿಸಿಕೊಂಡು, ತಮ್ಮ ಬ್ಯಾಂಕ್‌ಗೆ 3,47,900 ರೂ. ಮೋಸ ಮಾಡಿದ್ದ ಬಗ್ಗೆ ದೂರಿದ್ದರು. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ತಮ್ಮ ಬ್ಯಾಂಕ್ ಹಣ ವಾಪಾಸ್ಸು ಕೊಡಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು.
ಎಎಸ್ಪಿ ರಾಮಗೊಂಡ ಬಿ.ಬಸರಗಿ ನಿರ್ದೇಶನದಲ್ಲಿ ನಗರ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆ ಇನ್ಸಪೆಕ್ಟರ್ ಯು.ಜೆ.ಶಶಿಧರ್ ನೇತೃತ್ವದ ತಂಡವು ಉತ್ತರ ಪ್ರದೇಶ ಮೂಲಕ ಅಂತರಾಜ್ಯ ಮೋಸಗಾರರಾದ ಪ್ರಮೋದಕುಮಾರ, ಅರ್ಜುನ ಸಿಂಗ್, ಸಂದೀಪ್ ಸಿಂಗ್ ಚೌಹಾಣ್, ಲವ್ ಸಿಂಗ್‌ರನ್ನು ಪತ್ತೆ ಮಾಡಿ, ಬಂಧಿಸಿದೆ.
ಕೆಟಿಜೆ ನಗರ ಅಪರಾಧ ಠಾಣೆ ವಿಭಾಗದ ಸಿಬ್ಬಂದಿಯಾದ ಟಿ.ಪ್ರಕಾಶ, ಶಂಕರ್ ಆರ್.ಜಾಧವ್, ಎನ್.ಆರ್.ತಿಮ್ಮಣ್ಣ, ಎಂ.ಮಂಜಪ್ಪ, ಕೆ.ಷಣ್ಮುಖ, ಎಂ.ಎಸ್.ಶಿವರಾಜ, ಪುಷ್ಪಲತಾ, ಕೆ.ಎಚ್.ಅಮೃತ್, ರಾಘವೇಂದ್ರ, ಶಾಂತರಾಜ, ಆಟೋಮಿಕ್ ಸೆಂಟರ್ ಸಿಬ್ಬಂದಿಯವರ ಪತ್ತೆ ಕಾರ್ಯವನ್ನು ಎಸ್ಪಿ ಡಾ.ಕೆ.ಅರುಣ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಕಾರ್ಯಾಚರಣೆ ನಡೆಸಿದ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.