ದಾವಣಗೆರೆ: ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜನಸ್ಪಂದನ ಸಭೆಯ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಯಿತು. ಈ ವೇಳೆ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಇಲ್ಲವೆಂದರೆ ಮೊದಲ ಡೋಸ್ ಪಡೆದುಕೊಂಡಿದ್ದು ವ್ಯರ್ಥವಾಗತ್ತದೆ ಎಂದು ತಿಳಿಸಿದರು.
ಈ ವೇಳೆ ಡಿಹೆಚ್‍ಒ ಡಾ.ನಾಗರಾಜ್ ಮಾತನಾಡಿ, ಕೊರೋನ ಎರಡನೇ ಅಲೆ ಪ್ರಾರಂಭವಾಗಿದ್ದು ಇದರ ನಿಯಂತ್ರಣಕ್ಕೆ ಲಸಿಕೆ ನೀಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್‍ಲೈನ್ ವರ್ಕರ್ಸ್ ಮೊದಲ ಡೋಸ್ ಹಾಕಿಸಿಕೊಂಡಿದ್ದು, ಎರಡನೇ ಡೋಸ್ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಒಂದು ವೇಳೆ 2ನೇ ಡೋಸ್ ಹಾಕಿಸಿಕೊಳ್ಳದೇ ಹೋದರೆ ಲಸಿಕೆ ಫಲಕಾರಿಯಾಗುವುದಿಲ್ಲ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೇಷ್ಮಾ ಕೌಸರ್ ಮಾತನಾಡಿ, ಮಹಿಳಾ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿದ್ದು ವಾರಕ್ಕೆ ಒಂದು ಬಾರಿ ನೀರು ಬಿಡುತ್ತಾರೆ. ನೀರಿನ ಕೊರತೆ ಅತೀ ಹೆಚ್ಚಾಗಿ ಇರುವುದಲ್ಲದೇ ಕೊರೆಸಿದ ಬೋರ್ ವೆಲ್‍ಗಳಿಂದ ನೀರು ಬೀಳುತ್ತಿಲ್ಲ. ಬೇಸಿಗೆ ದಿನಗಳಲ್ಲಿ ನೀರು ಒಣಗುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ವಾರಕ್ಕೆ ಎರಡು ಬಾರಿ ಟ್ಯಾಂಕರ್ ನೀರು ತಲುಪಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್.ಗಂಗಪ್ಪ ಮಾತನಾಡಿ, ಗಿರಿಯಪ್ಪ ಲೇಔಟ್ ಅಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗಿದ್ದು, ಈಗಾಗಲೇ 3 ಬಾರಿ ಬೋರ್‍ವೆಲ್ ಕೊರೆಸಿದರೂ ನೀರು ಬಿದ್ದಿಲ್ಲ. ಪಾಲಿಕೆಯ ಪೈಪ್‍ಲೈನ್ ಕೂಡ ಲೇಔಟ್ ನಿಂದ ದೂರದಲ್ಲಿದ್ದು ಸಂಪರ್ಕ ನೀಡಿಲ್ಲ. ಆದ್ದರಿಂದ ಈ ಲೇಔಟ್ ಗೆ ಪೈಪ್‍ಲೈನ್ ವ್ಯವಸ್ಥೆ ಮಾಡಿ ಹಾಗೂ ವಾರಕ್ಕೆ 2-3 ಬಾರಿ ಟ್ಯಾಂಕರ್ ನೀರನ್ನು ಬಿಡುವ ವ್ಯವಸ್ಥೇ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಾರಕ್ಕೆ 2 ಬಾರಿ ಟ್ಯಾಂಕರ್ ನೀರು ಬಿಡುವಂತೆ ಹಾಗೂ ಪೈಪ್‍ಲೈನ್ ಅಳವಡಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪೂಜಾರ ವೀರಮಲ್ಲಪ್ಪ, ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದ್ದಜ್ಜಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಕೌಸರ್ ಬಾನು, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



