ದಾವಣಗೆರೆ: ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 16 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಆದೇಶ ನೀಡಲಾಗಿದ್ದು ನಮ್ಮ ರಾಜ್ಯದ ಯುವಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಭೂ ಸ್ವಾಧೀನ ಪ್ರಗತಿ ಪರಿಶೀಲಿಸಿ ಮಾತನಡಿದರು.ಮುಂದಿನ ದಿನಗಳಲ್ಲಿ ಖಾಲಿ ಇರುವ 46 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುತ್ತದೆ. ರೈಲ್ವೆ ಇಲಾಖೆಯಲ್ಲಿ ಒಟ್ಟು 12 ಲಕ್ಷ ಹುದ್ದೆಗಳಿದ್ದು 15 ಲಕ್ಷ ಜನರು ಪಿಂಚಣಿ ಪಡೆಯುತ್ತಿದ್ದಾರೆ.
ರೈಲ್ವೆ ವೇಗ ಹೆಚ್ಚಿಸಲು ಕ್ರಮ; ರೈಲ್ವೆ ಇಂಜಿನ್‍ಗಳು ಬಹುತೇಕ ಶೇ 98 ರಷ್ಟು ವಿದ್ಯುತ್ ಚಾಲಿತವಾಗಿದ್ದು ಶೇ 2 ರಷ್ಟು ಮಾತ್ರ ಡೀಸೆಲ್ ಇಂಜಿನ್‍ಗಳಿವೆ. ರೈಲ್ವೆ ಪ್ರಯಾಣದ ವೇಗ ಪ್ರಸ್ತುತ 110 ಕಿ.ಮೀ ಇದ್ದು ಇದನ್ನು 135 ಕಿ.ಮೀ ವರೆಗೆ ವೇಗ ಹೆಚ್ಚಿಸುವ ಗುರಿಯೊಂದಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮಾಡಲಾಗುತ್ತಿದೆ. ವಂದೇ ಭಾರತ್ ರೈಲು ಬಡುವರು, ಮಧ್ಯಮ ವರ್ಗದವರಿಗೆ ತುರ್ತು ಪ್ರಯಾಣಕ್ಕಾಗಿ ಕೈಗೆಟಕುವ ದರದಲ್ಲಿ ಟಿಕೆಟ್ ಇದ್ದು ಇದರಲ್ಲಿ ನೀಡಲಾಗಿರುವ ಸೌಲಭ್ಯಗಳ ಬಗ್ಗೆ ಅರಿಯಲು ಪ್ರಯಾಣಿಸಬೇಕೆಂದರು.



